ಕರ್ನಾಟಕ

karnataka

ETV Bharat / state

ವಿಜಯನಗರ ಜಿಲ್ಲೆಯ ಹೋರಾಟಕ್ಕಿದೆ ಎರಡು ದಶಕದ ಇತಿಹಾಸ..! - ವಿಜಯನಗರ ಜಿಲ್ಲೆಯ ಹೋರಾಟಕ್ಕಿದೆ ಎರಡು ದಶಕದ ಇತಿಹಾಸ

ವಿಜಯನಗರ ಜಿಲ್ಲೆಯ ಹೋರಾಟಕ್ಕೆ ಎರಡು ದಶಕಗಳ ಇತಿಹಾಸವಿದೆ.‌ 1997 ರಲ್ಲಿ ಹೊಸಪೇಟೆಯ ಕೆಲವರು ಪ್ರಾರಂಭಿಸಿದ ಪ್ರತ್ಯೇಖ ಜಿಲ್ಲೆಯ ಹೋರಾಟಕ್ಕೆ ಇದೀಗ ಗೆಲವು ಸಿಕ್ಕಿದ್ದು, ರಾಜ್ಯ ಸರ್ಕಾರ ವಿಜಯನಗರ ಜಿಲ್ಲೆಗೆ ತಾತ್ವಿಕ ಒಪ್ಪಿಗೆಯನ್ನು ನೀಡಿದೆ.‌

Vijayanagar district fight has a two decade history
ವಿಜಯನಗರ ಜಿಲ್ಲೆಯ ಹೋರಾಟ ಪ್ರಾರಂಭವಾಗದ್ದು ಹೇಗೆ

By

Published : Nov 24, 2020, 8:03 PM IST

ಹೊಸಪೇಟೆ : ವಿಜಯನಗರ ಜಿಲ್ಲೆಯ ಹೋರಾಟಕ್ಕೆ ಎರಡು ದಶಕಗಳ ಇತಿಹಾಸವಿದೆ. ‌ಇದು ನಿನ್ನೆ ಮೊನ್ನೆ ಹುಟ್ಟಿದ ಹೋರಾಟವಲ್ಲ. 1997 ರಲ್ಲಿ ಗದ್ದಿಗೌಡರ ಸಮಿತಿ ಶಿಫಾರಸಿನಂತೆ ಕೊಪ್ಪಳ‌ ಜಿಲ್ಲೆ ಉದಯವಾಗುತ್ತದೆ. ‌ಆಗ ಹೊಸಪೇಟೆಯ ಕೆಲವರಲ್ಲಿ ವಿಜಯನಗರ ಜಿಲ್ಲೆಯಾಗಬೇಕು ಎನ್ನುವ ಚಿಂತನೆ ಮೂಡುತ್ತದೆ. ಬಳಿಕ 2004 ರಲ್ಲಿ ವಿಜಯನಗರ ಜಿಲ್ಲೆ ಹೋರಾಟ ತೀವ್ರ ಸ್ವರೂಪ ಪಡೆಯುತ್ತದೆ.

2004 ರಲ್ಲಿ ದಿ.ಡಾ.ಉಳ್ಳೇಶ್ವರ, ವೈ.ಯಮುನೇಶ, ಮಲ್ಲಾರಿದೀಕ್ಷಿತ್, ಗಾಳೆಪ್ಪ, ಮಡ್ಡಿ ಮಂಜುನಾಥ, ಗುಜ್ಜಲ್ ನಾಗರಾಜ ಸೇರಿದಂತೆ ಪ್ರಮುಖರು ನಗರದ ಗಂಗಾ ಪರಮೇಶ್ವರಿ ಸಮುದಾಯ ಭವನದಲ್ಲಿ ಸಭೆ ನಡೆಸುತ್ತಾರೆ.‌ ಆ ಸಂದರ್ಭದಲ್ಲಿ ಗಂಗಾಮತ ಸಮುದಾಯದಿಂದ ವಿಜಯನಗರ ಜಿಲ್ಲೆ ಹೋರಾಟಕ್ಕೆ 5 ಸಾವಿರ ರೂ. ದೇಣಿಗೆ ನೀಡಲಾಗುತ್ತದೆ.‌ ಇದು ಹೋರಾಟಕ್ಕೆ ಮತ್ತಷ್ಟು ಉತ್ತೇಜನ ನೀಡಿದಂತಾಗುತ್ತದೆ.

ವಿಜಯನಗರ ಜಿಲ್ಲೆಯ ಹೋರಾಟ ಪ್ರಾರಂಭವಾಗಿದ್ದು ಹೇಗೆ ..?

2006-7 ರಲ್ಲಿ ವಿಜಯನಗರ ಜಿಲ್ಲೆಯಾಗಬೇಕೆಂಬ ಹೋರಾಟ ಉಗ್ರ ಸ್ವರೂಪ‌ ಪಡೆದುಕೊಳ್ಳುತ್ತದೆ.‌ ವಿಜಯನಗರ ಜಿಲ್ಲಾ ಹೋರಾಟ ಸಮಿತಿಯ ಸದಸ್ಯರು ತಾಲೂಕುಗಳಲ್ಲಿ ಸಂಚರಿಸಿ, ಶಾಸಕರು ಹಾಗೂ ಮಠಾಧೀಶರ ಬೆಂಬಲ ಕೋರುತ್ತಾರೆ.‌ ಎಲ್ಲರೂ ವಿಜಯನಗರ ಜಿಲ್ಲೆಗೆ ಒಪ್ಪಿಗೆ ಸೂಚಿಸುತ್ತಾರೆ. ಆಗ ಹೂವಿನಹಡಗಲಿಯ ಮೈಲಾರದಿಂದ ಹಂಪಿವರೆಗೆ ಸೈಕಲ್ ಮೋಟರ್ ಜಾಥಾ ನಡೆಸಲಾಗುತ್ತದೆ. ಇದಾದ ಬಳಿಕ ಸತತ 100 ದಿನಗಳ ಕಾಲ ಪ್ರತಿಭಟನೆ ಮಾಡುವ ಮೂಲಕ ಹೋರಾಟ ಮಾಡಲಾಗುತ್ತದೆ.

‌ವಿಜಯನಗರ ಜಿಲ್ಲಾ ಹೋರಾಟ ಸಮಿತಿ ಪಕ್ಷಾತೀತವಾಗಿ ರಚನಗೊಂಡಿರುತ್ತದೆ. ‌ಇಲ್ಲಿ ಎಲ್ಲರ ಮೂಲ ಉದ್ದೇಶ ವಿಜಯನಗರ ಜಿಲ್ಲೆಯಾಗಬೇಕು ಎಂಬುವುದಾಗಿತ್ತು.‌ ಇದರಿಂದ ಈ‌ ಭಾಗದ ಪಶ್ಚಿಮ ತಾಲೂಕುಗಳು ಅಭಿವೃದ್ದಿ ಹೊಂದಲು ಸಾಧ್ಯ ಎಂಬುವುದು ಮುಖಂಡರ ಒತ್ತಾಸೆಯಾಗಿರುತ್ತದೆ. ಮಾಜಿ ಶಾಸಕರಾದ ಶಂಕರಗೌಡ, ರತನ್ ಸಿಂಗ್, ಕೊಂಡಯ್ಯ, ಗುಜ್ಜಲ್ ಜಯಲಕ್ಷ್ಮಿ, ಗವಿಯಪ್ಪ ಕೂಡ ವಿಜಯನಗರ ಜಿಲ್ಲಾ ಹೋರಾಟಕ್ಕೆ ಬೆಂಬಲ ಸೂಚಿಸಿದ್ದರು.

ಅಲ್ಲದೇ, ಹೊಸಪೇಟೆಯ ಸಂಘ- ಸಂಸ್ಥೆಗಳು ಹಾಗೂ ಪಶ್ಚಿಮ ತಾಲೂಕಿನ ಸಂಘ- ಸಂಸ್ಥೆಗಳ ಬೆಂಬಲ ವಿಜಯನಗರ ಜಿಲ್ಲಾ ಹೋರಾಟ ಸಮಿತಿಗಿತ್ತು.‌ ಡಾ.ಉಳ್ಳೇಶ್ವರ ಅವರು ವಿಜಯನಗರ ಜಿಲ್ಲಾ ಹೋರಾಟ ಸಮಿತಿಯ ರಚನೆಗೆ ಪ್ರೇರಕ ಶಕ್ತಿಯಾಗಿದ್ದರು.‌ ಬಳಿಕ ಅಪಘಾತದಲ್ಲಿ ಅವರು ಮೃತಪಡುತ್ತಾರೆ. ವಿಜಯನಗರ ಜಿಲ್ಲಾ ಹೋರಾಟಕ್ಕೆ ದೊಡ್ಡ ಮಟ್ಟದ ಸ್ವರೂಪ ನೀಡಿದ್ದು, ಡಾ.ಉಳ್ಳೇಶ್ವರ ಅವರು. ಅಲ್ಲದೆ, ಹೊಸಪೇಟೆಯ ಎಂ.ಸಿ.ವೀರಸ್ವಾಮಿ, ರಾಮಕೃಷ್ಣ ನಿಂಬಗಲ್, ಪಾಂಡುರಂಗ ಶೆಟ್ಟಿ, ಬಾಬುಲಾಲ್ ಜೈನ್ ಹೋರಾಟವನ್ನು ತೀವ್ರಗೊಳಿಸುತ್ತಾರೆ.

ಬಳಿಕ ವಿಜಯನಗರ ಜಿಲ್ಲಾ ಹೋರಾಟ ಸಮಿತಿ ಮನವಿಗಳನ್ನು ನೀಡುವ ಮೂಲಕ, ಹೋರಾಟದ ಕಾವನ್ನು ಕಾಪಾಡಿಕೊಂಡು ಬರುತ್ತದೆ.‌ ಇದಾದ ನಂತರ ವಿಜಯನಗರ ಜಿಲ್ಲಾ ಕೂಗು ತಣ್ಣಾಗಾಗುತ್ತದೆ. ನಂತರ ಬಳ್ಳಾರಿ ಜಿಲ್ಲೆಗೆ ಮೂರು ಹೊಸ ತಾಲೂಕುಗಳು ಉದಯವಾಗುತ್ತದೆ.‌ ಕಂಪ್ಲಿ, ಕುರುಗೋಡು ಹಾಗೂ ಕೊಟ್ಟೂರು. ಇದೇ ಸಂದರ್ಭದಲ್ಲಿ ಹರಪನಹಳ್ಳಿ ಕೂಡ ದಾವಣಗೆರೆ ಜಿಲ್ಲೆಯಿಂದ ಬೇರ್ಪಟ್ಟು ಪುನಹಃ ಬಳ್ಳಾರಿಗೆ ಸೇರ್ಪಡೆಯಾಗುತ್ತದೆ.‌ ಕಲ್ಯಾಣ ಕರ್ನಾಟಕದ ಅತೀ ದೊಡ್ಡ ಜಿಲ್ಲೆಯಾಗಿ ಬಳ್ಳಾರಿ ಹೊರ ಹೊಮ್ಮುತ್ತದೆ. ಬಳ್ಳಾರಿ, ಕುರುಗೋಡು, ಕಂಪ್ಲಿ, ಸಂಡೂರು, ಹೊಸಪೇಟೆ, ಹಗರಿಬೊಮ್ಮನಹಳ್ಳಿ, ಕೊಟ್ಟೂರು, ಕೂಡ್ಲಿಗಿ, ಹರಪನಹಳ್ಳಿ, ಹೂವಿನಹಡಗಲಿ ತಾಲೂಕುಗಳಾಗಿರುತ್ತವೆ.

ಬಳಿಕ, ಆನಂದ್​‌‌‌ ಸಿಂಗ್ ಅವರು ವಿಜಯನಗರ ಜಿಲ್ಲಾ ವಿಷಯವನ್ನು ಮುನ್ನಲೆಗೆ ತರುತ್ತಾರೆ.‌ 2018 ರಲ್ಲಿ ನಡೆದ ವಿಧಾನಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ಮೂಲಕ ಆನಂದ ಸಿಂಗ್ ಅವರು ವಿಜಯನಗರ ಕ್ಷೇತ್ರದ ಮೂಲಕ ಆಯ್ಕೆಯಾಗುತ್ತಾರೆ.‌ ಆಗ ಕಾಂಗ್ರೆಸ್ ಹಾಗೂ ಜೆಡಿಎಸ್ ನೇತೃತ್ವದಲ್ಲಿ ಸಮ್ಮಿಶ್ರ ಸರ್ಕಾರ ರಚನೆಯಾಗುತ್ತದೆ.‌ ಆ ಸಂದರ್ಭದಲ್ಲಿ ಹೆಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನವನ್ನು ಸ್ವೀಕರಿಸುತ್ತಾರೆ.‌ ಶಾಸಕ ಆನಂದ ಸಿಂಗ್, ಹೊಸಪೇಟೆಯನ್ನು ವಿಜಯನಗರ ಜಿಲ್ಲೆಯನ್ನಾಗಿ ಮಾಡಬೇಕು ಎಂದು ಮುಖ್ಯಮಂತ್ರಿಗಳಲ್ಲಿ ಮನವಿ‌ ಮಾಡಿಕೊಳ್ಳುತ್ತಾರೆ. ‌ಆದರೆ, ಆನಂದ‌‌ ಸಿಂಗ್ ಅವರಿಗೆ ಸರ್ಕಾರದಿಂದ ವಿಜಯನಗರ ಜಿಲ್ಲೆ ಕುರಿತು ಅಷ್ಟೊಂದು ಬೆಂಬಲ ಸಿಗುವುದಿಲ್ಲ.

ಬಳಿಕ ಆನಂದ್​ ಸಿಂಗ್ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುತ್ತಾರೆ.‌ ವಿಜಯನಗರ ಜಿಲ್ಲೆಗಾಗಿ ರಾಜೀನಾಮೆ‌‌ ನೀಡಿದ್ದೇನೆ ಎಂದು ಹೇಳಿಕೆಗಳನ್ನು‌ ನೀಡುತ್ತಾರೆ.‌ ಬಳಿಕ 2019 ನವೆಂಬರ್​ನಲ್ಲಿ ಬಿಜೆಪಿ ಮೂಲಕ ಸ್ಪರ್ಧೆ ಮಾಡಿ ಮತ್ತೊಮ್ಮೆ ಶಾಸಕರಾಗಿ ಆಯ್ಕೆಯಾಗುತ್ತಾರೆ.‌ ಅಲ್ಲಿಂದ ಇಲ್ಲಿವರೆಗೂ ವಿಜಯನಗರ ಜಿಲ್ಲೆಯಾಗಬೇಕು ಎಂಬುವುದು ಆನಂದ್​ ಸಿಂಗ್ ಅವರ ಒತ್ತಾಸೆಯಾಗಿತ್ತು.‌ ಅವರ ಒತ್ತಾಯದಂತೆ, ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರ ವಿಜಯನಗರ ಜಿಲ್ಲೆಗೆ ತಾತ್ವಿಕ ಒಪ್ಪಿಗೆಯನ್ನು ನೀಡಿದೆ.‌

ABOUT THE AUTHOR

...view details