ಕರ್ನಾಟಕ

karnataka

ETV Bharat / state

ಕೂಡ್ಲಿಗಿಯಲ್ಲಿ ಕಲುಷಿತ ನೀರು ಸೇವನೆಯಿಂದ 11ಕ್ಕೂ ಹೆಚ್ಚು ಜನರಿಗೆ ವಾಂತಿಭೇದಿ: ಆಸ್ಪತ್ರೆಗೆ ಶಾಸಕರ ಭೇಟಿ, ಪರಿಶೀಲನೆ

ಕೂಡ್ಲಿಗಿ ತಾಲೂಕಿನ ಬಡೇಲಡಕು ದೊಡ್ಡಗೊಲ್ಲರಹಟ್ಟಿ ಗ್ರಾಮದಲ್ಲಿ ಕಲುಷಿತ ನೀರು ಪೂರೈಕೆಯಿಂದ 11ಕ್ಕೂ ಅಧಿಕ ಜನರಲ್ಲಿ ವಾಂತಿಭೇದಿ ಕಾಣಿಸಿಕೊಂಡಿದೆ.

MLA Srinivas visited and inquired about the health of the sick
ಶಾಸಕ ಶ್ರೀನಿವಾಸ್ ಭೇಟಿ ನೀಡಿ ಅಸ್ವಸ್ಥರ ಆರೋಗ್ಯವನ್ನು ವಿಚಾರಿಸಿದರು

By

Published : Jul 2, 2023, 8:34 PM IST

Updated : Jul 2, 2023, 8:49 PM IST

11ಕ್ಕೂ ಹೆಚ್ಚು ಜನರಿಗೆ ವಾಂತಿಭೇದಿ,ಆಸ್ಪತ್ರೆಗೆ ಶಾಸಕರ ಭೇಟಿ

ವಿಜಯನಗರ: ಕಲುಷಿತ ನೀರು ಸೇವನೆಯಿಂದ 11ಕ್ಕೂ ಹೆಚ್ಚು ಜನರು ವಾಂತಿ ಭೇದಿಯಿಂದ ಅಸ್ವಸ್ಥಗೊಂಡಿರುವ ಘಟನೆ ಕೂಡ್ಲಿಗಿ ತಾಲೂಕಿನ ಬಡೇಲಡಕು ಗೊಲ್ಲರಹಟ್ಟಿಯಲ್ಲಿ ಇಂದು ನಡೆದಿದೆ. ಕಳೆದೆರಡು ದಿನದಿಂದ ಬಡೇಲಡಕು ದೊಡ್ಡಗೊಲ್ಲರಹಟ್ಟಿ ಗ್ರಾಮಕ್ಕೆ ಕಲುಷಿತ ನೀರು ಪೂರೈಕೆ ಆಗುತ್ತಿದೆ. ಕುಪ್ಪಿನಕೆರೆ ಗ್ರಾಮದ ಪಕ್ಕದ ರಸ್ತೆಯ ಹಳ್ಳ ಹಾಗೂ ಕಟ್ಟೆ ಬಳಿ 3 ರಿಂದ 4 ಕಡೆ ಪೈಪ್ ಒಡೆದುಹೋಗಿದ್ದು, ಅಲ್ಲಿಂದ ಪೈಪಿನಲ್ಲಿ ಕಲ್ಮಶ ಮಿಕ್ಸ್ ಆಗಿ ನೀರು ಸರಬರಾಜು ಆಗಿದೆ. ಇದು ಗೊತ್ತಾಗದೇ ಗ್ರಾಮಸ್ಥರು ಕಲ್ಮಶ ನೀರು ಸೇವಿಸಿದ್ದು, 11ಕ್ಕೂ ಅಧಿಕ ಜನರಲ್ಲಿ ವಾಂತಿಭೇದಿ ಕಾಣಿಸಿಕೊಂಡಿದೆ.

ಕೂಡ್ಲಿಗಿ ಆರೋಗ್ಯ ಇಲಾಖೆ ಅಧಿಕಾರಿಗಳು ವಾಂತಿಭೇದಿಗೆ ದೊಡ್ಡಗೊಲ್ಲರಹಟ್ಟಿ ಗ್ರಾಮಕ್ಕೆ ಕಲುಷಿತ ನೀರು ಕಾರಣವೆಂದು ಅಂದಾಜಿಸಿದ್ದು, ಬಳ್ಳಾರಿ ಪರೀಕ್ಷಾ ಕೇಂದ್ರಕ್ಕೆ ಕಲುಷಿತ ನೀರು ರವಾನೆ ಮಾಡಿದ್ದಾರೆ. ದೊಡ್ಡಗೊಲ್ಲರಹಟ್ಟಿ ಗ್ರಾಮದಲ್ಲಿ ಆರೋಗ್ಯ ಇಲಾಖೆ ಅಧಿಕಾರಿಗಳು ಠಿಕಾಣಿ ಹೂಡಿದ್ದು, ಜನರ ಆರೋಗ್ಯದ ತಪಾಸಣೆಯಲ್ಲಿ ತೊಡಗಿದ್ದಾರೆ. ಒಂದು ಆ್ಯಂಬ್ಯುಲೆನ್ಸ್ ಸಹ ಮೊಕ್ಕಾಂ ಹೂಡಿದೆ. ಕಲುಷಿತ ನೀರು ಸೇವನೆಯಿಂದ ಅಸ್ವಸ್ಥರಾದವರನ್ನು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಶಾಸಕ ಶ್ರೀನಿವಾಸ್ ಭೇಟಿ ನೀಡಿ ಅಸ್ವಸ್ಥರ ಆರೋಗ್ಯವನ್ನು ವಿಚಾರಿಸಿದರು. ಕೂಡಲೇ ಪೈಪ್ ದುರಸ್ತಿ ಕಾರ್ಯ ನಡೆಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಶುದ್ಧ ನೀರು ಪೂರೈಕೆಗೆ ಆಗ್ರಹ: ಶುದ್ಧ ಕುಡಿಯುವ ನೀರು ಪೂರೈಕೆ ಮಾಡುವ ಬಹುತೇಕ ಗ್ರಾಮಗಳಲ್ಲೂ ಕೂಡ ಹೊಲಸು ನೀರು ಪೂರೈಕೆ ಆಗುತ್ತಿದೆ. ಇದು ಜನರ ನೆಮ್ಮದಿ ಕದಡಿದೆ. ಕೆಟ್ಟ ವಾಸನೆ ಮತ್ತು ಕಾಫಿ ಬಣ್ಣದ ನೀರು ಪೂರೈಕೆ ಆಗುತ್ತಿದೆ. ಇದು ಜನರ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂದು ಜನರು ಆರೋಪಿಸಿದ್ದಾರೆ.

ಜನರಿಗೆ ಪೂರೈಕೆ ಆಗುತ್ತಿರುವ ನೀರು ಪೈಪ್‌ಲೈನ್‌ಗಳಲ್ಲಿ ಕಲುಷಿತಗೊಳ್ಳುತ್ತಿದೆ. ಇದಕ್ಕೆ ಇಲಾಖೆಯನ್ನು ಹೊಣೆ ಮಾಡುವುದಕ್ಕಿಂತ ವ್ಯವಸ್ಥೆಯಲ್ಲಿನ ಲೋಪಗಳನ್ನು ಸರಿಮಾಡಿಕೊಳ್ಳಬೇಕು. ಆದರೆ, ಎಲ್ಲ ವ್ಯವಸ್ಥೆ ಸರಿ ಮಾಡುವುದು ಜಲ ಮಂಡಳಿಯ ಕರ್ತವ್ಯ, ಆದರೆ ಅದನ್ನು ಸರಿಯಾಗಿ ನಿಭಾಯಿಸುತ್ತಿಲ್ಲವೆಂದು ಜನರು ಆರೋಪಿಸಿದ್ದಾರೆ. ಅಲ್ಲದೆ ಕೂಡಲೇ ತಾಲೂಕಿನ ಬಹುತೇಕ ಗ್ರಾಮಗಳಲ್ಲಿ ಕಲುಷಿತ ಮಿಶ್ರಿತ ನೀರು ತಡೆದು ಶುದ್ಧ ನೀರು ಪೂರೈಕೆ ಮಾಡಬೇಕೆಂದು ಆಗ್ರಹಿಸಿದ್ದಾರೆ.

ಹೆಚ್ಚುತ್ತಿರುವ ಕಲುಷಿತ ನೀರು ಪೂರೈಕೆ ಪ್ರಕರಣಗಳು:ರಾಜ್ಯದಲ್ಲಿ ಕಲುಷಿತ ನೀರು ಸೇವಿಸಿ ವಾಂತಿಭೇದಿ ಉಂಟಾಗಿ ಅಸ್ವಸ್ಥರಾಗಿರುವ ಪ್ರಕರಣಗಳು ಇತ್ತೀಚೆಗೆ ಹೆಚ್ಚುತ್ತಿವೆ. ಇತ್ತೀಚೆಗೆ ಬೆಂಗಳೂರಿನ ಮಹಾವೀರ್‌ ರಾಂಚಸ್‌ ಅಪಾರ್ಟ್‌ಮೆಂಟ್‌ನಲ್ಲಿಕಲುಷಿತ ನೀರು ಸೇವಿಸಿ ಒಂದೇ ಅಪಾರ್ಟ್‌ಮೆಂಟ್‌ನ 30ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥರಾಗಿದ್ದರು. ಜ್ವರ, ವಾಂತಿ, ಭೇದಿಯಿಂದ ಮಕ್ಕಳು ಬಳಲುತ್ತಿದ್ದ ಕಾರಣ ಸಿಂಗಸಂದ್ರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಇಬ್ಬರು ಮಕ್ಕಳಿಗೆ ಚಿಕಿತ್ಸೆ ನೀಡಲಾಯಿತು. ಮತ್ತಿಬ್ಬರು ಮಕ್ಕಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಳ್ಳಂದೂರು ಬಳಿಯ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಯಿತು.

ಇದನ್ನೂ ಓದಿ :ನಾಳೆಯಿಂದ 16ನೇ ವಿಧಾನಸಭೆಯ ಮೊದಲ ಅಧಿವೇಶನ ಆರಂಭ; ಆಡಳಿತ ಪಕ್ಷ-ಪ್ರತಿಪಕ್ಷ ಮಧ್ಯೆ 'ಗ್ಯಾರಂಟಿ' ಕದನ ಕಲಹ

Last Updated : Jul 2, 2023, 8:49 PM IST

ABOUT THE AUTHOR

...view details