ಬಳ್ಳಾರಿ:ಬದುಕು ನಿಂತಿರುವುದು ವಸ್ತುಗಳಿಂದಲ್ಲ, ಚಿಂತನೆಗಳಿಂದ ಎಂದು ವಿರುಪಾಕ್ಷ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ವೀರಶೈವ ಮಹಾವಿದ್ಯಾಲಯದ ಪ್ರತಿಭೋತ್ಸವ ಕಾರ್ಯಕ್ರಮದಲ್ಲಿ ನುಡಿದರು.
ನಗರದ ಹೊರವಲಯದ ವೀರಶೈವ ಮಹಾವಿದ್ಯಾಲಯದಲ್ಲಿ ನಡೆದ ಪ್ರತಿಭೋತ್ಸವ ಕಾರ್ಯಕ್ರಮವನ್ನು ವಿರುಪಾಕ್ಷ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಉದ್ಘಾಟಿಸಿ ಪ್ರವಚನ ನೀಡಿದರು. ನಿನಗೆ ಗೊತ್ತು, ಗುರಿಗಳು ಇಲ್ಲ. ಮನೆ ಕಟ್ಟೋದು, ಕಟ್ಟಡ ಕಟ್ಟೋದು, ಜಾಗ ತೆಗೆದುಕೊಳ್ಳುವುದು, ಹೊಲ ಖರೀದಿಸುವುದು, ಸ್ವಿಸ್ ಬ್ಯಾಂಕ್ನಲ್ಲಿ ಕಟ್ಟುಗಟ್ಟಲೇ ಹಣ ಇಡೋದಲ್ಲ. ಬದಲಿಗೆ ನಿನ್ನನ್ನ ನೀನು ಈ ಜಗತ್ತಿಗೆ ಅನಾವರಣಗೊಳಿಸುವುದೇ ಸಾಧನೆ. ಅದುವೇ ಗೊತ್ತು, ಗುರಿ ಎಂದು ಆಂಗ್ಲ ಕವಿಯ ಹೇಳಿಕೆಯನ್ನು ಸ್ಮರಿಸಿದರು. ಈ ಮೂಲಕ ಸಾಧನೆ ಕಡೆಗೆ ಹೆಚ್ಚಿನ ಗಮನ ಕೊಡುವಂತೆ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ನಂತರ ಯುಪಿಎಸ್ಸಿ ಪರೀಕ್ಷೆಯಲ್ಲಿ 423 ನೇ ರ್ಯಾಂಕ್ ಪಡೆದ ಬಳ್ಳಾರಿ ಜಿಲ್ಲೆಯ ಬಿ.ವಿ ಅಶ್ವಿಜಾ ಮಾತನಾಡಿ, ಪದವಿ ಓದುವಾಗಲೇ ಹೆಚ್ಚೆಚ್ಚು ವಿಷಯ ಮಾಹಿತಿ ತಿಳಿದುಕೊಳ್ಳಬೇಕು. ಸಮಾಜದಿಂದ ಅನೇಕ ಸೌಲಭ್ಯ ಪಡೆದಿದ್ದೇವೆ. ಆದರೆ ಸಮಾಜಕ್ಕೆ ನಮ್ಮ ಕೊಡುಗೆ ಏನು ಎನ್ನುವ ಪ್ರಶ್ನೆಯನ್ನು ಇಟ್ಟುಕೊಂಡು ವಿದ್ಯಾಭ್ಯಾಸ ಮಾಡಬೇಕು ಎಂದು ಸಲಹೆ ನೀಡಿದರು. ಇದೇ ವೇಳೆ ಯುಪಿಎಸ್ಸಿ ಪರೀಕ್ಷೆಯ ಅನುಭವವನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡರು.