ಬಳ್ಳಾರಿ:ನೀರು, ಒಳಚರಂಡಿ, ಆಸ್ತಿ ಕರ ಹಾಗೂ ಇನ್ನಿತರ ದಂಡ ವಸೂಲಾತಿಗೆ ಕೈಬರಹ ರಶೀದಿ ಬದಲಿಗೆ, ಇನ್ಮುಂದೆ ಮೆಷಿನ್ ಬಳಸಲಾಗುತ್ತದೆ ಎಂದು ಎಂದು ಮಹಾನಗರ ಪಾಲಿಕೆ ಆಯುಕ್ತೆ ತುಷಾರಮಣಿ ತಿಳಿಸಿದರು.
ಕಾಗದ ರಹಿತ ವ್ಯವಸ್ಥೆ ಅಳವಡಿಸಿಕೊಂಡಿರುವ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೈ ಬರಹದ ರಶೀದಿ ನೀಡುವುದಕ್ಕೆ ಇತಿಶ್ರೀ ಹಾಡಲಾಗಿದೆ. ಈಜೀಟ್ಯಾಪ್ ಮೆಷಿನ್ ಮೂಲಕ ಕರ ಸಂಗ್ರಹ ಹಾಗೂ ದಂಡ ವಸೂಲಿ ಮಾಡಲಾಗುತ್ತದೆ. ಈ ಮೂಲಕ ಅವ್ಯವಹಾರಗಳಿಗೆ ಕಡಿವಾಣ ಹಾಕಲಾಗುತ್ತದೆ ಎಂದು ಸ್ಪಷ್ಟಪಡಿಸಿದರು.
ಒಂದು ವೇಳೆ ಕೈ ಬರಹದ ಮೂಲಕ ರಶೀದಿ ನೀಡಿದ್ದು ಕಂಡು ಬಂದಲ್ಲಿ ಅಂತವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಈ ಕರ ಸಂಗ್ರಹಕ್ಕಾಗಿ 46 ಮೆಷಿನ್ಗಳನ್ನು ಬಳಸಿಕೊಳ್ಳಲಾಗುತ್ತಿದೆ. ಅವುಗಳನ್ನು ಹೆಚ್ಡಿಎಫ್ಸಿ ಬ್ಯಾಂಕ್ ಉಚಿತವಾಗಿ ನೀಡಿದೆ. ಸಿಬ್ಬಂದಿಗೆ ತರಬೇತಿ ನೀಡಲಾಗಿದೆ ಎಂದರು.
ಈಜೀಟ್ಯಾಪ್ ಮೆಷಿನ್ ಬಳಕೆಗೆ ಚಾಲನೆ ಇ-ಆಸ್ತಿ ಅರ್ಜಿ ಕೊಡುವುದು ಆರಂಭ :ಪಾಲಿಕೆಯಲ್ಲಿ ಇ-ಆಸ್ತಿ ಅರ್ಜಿ (ಇ-ಆಸ್ತಿ ಡಿಜಿಟೈಸ್ ಫಾರ್ಮಾಟ್) ಕೊಡುವುದನ್ನು ಆರಂಭಿಸಲಾಗಿದೆ. ಮೊದಲು ಕೈಯಲ್ಲಿ ಬರೆದುಕೊಡುತ್ತಿದ್ದ ಕಾರಣ ಬಹಳಷ್ಟು ನಕಲು, ಅವ್ಯವಹಾರದ ದೂರು ಬರುತ್ತಿದ್ದವು. ಈಗ ಅದಕ್ಕೆ ಕಡಿವಾಣ ಬೀಳಲಿದೆ. ಅದರಲ್ಲಿ ಇ-ಆಸ್ತಿಯಲ್ಲಿ ಮನೆ, ಮನೆ ಮಾಲೀಕರ ಚಿತ್ರ, ಮನೆ ಎಷ್ಟು ಮಹಡಿಗಳಿದೆ ಎಂಬುದರ ಚಿತ್ರ ನಮೂದಾಗಲಿದೆ. ಪ್ರತಿ ಇ-ಆಸ್ತಿಗೂ ಪ್ರಾಪರ್ಟಿ ಸಂಖ್ಯೆ ನೀಡಲಾಗುವುದು. ಅದರಲ್ಲಿ ವಾರ್ಡ್, ಬ್ಲಾಕ್, ಬೀದಿ ಮತ್ತು ಮನೆ ನಂಬರ್ ಇರಲಿದೆ ಎಂದರು.