ಬಳ್ಳಾರಿ:ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ಟ್ರ್ಯಾಕ್ಟರ್ ಪಲ್ಟಿಯಾಗಿ ಸ್ಥಳದಲ್ಲಿಯೇ ನಾಲ್ವರು ಸಾವನ್ನಪ್ಪಿರುವ ಭೀಕರ ಅಪಘಾತ ಹೂವಿನ ಹಡಗಲಿ ತಾಲೂಕಿನ ಹೊಳಲು ಗ್ರಾಮದ ಬಳಿ ಸಂಭವಿಸಿದೆ.
ಹೊಳಲು ಬಳಿ ಟ್ರ್ಯಾಕ್ಟರ್ಗೆ ಅಪರಿಚಿತ ವಾಹನ ಡಿಕ್ಕಿ: ನಾಲ್ವರು ದುರ್ಮರಣ
ಹೂವಿನ ಹಡಗಲಿ ತಾಲೂಕಿನ ಹೊಳಲು ಗ್ರಾಮದ ಗಿರಿಯಾಪುರ ಮಠದ ಬಳಿ ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ಟ್ರ್ಯಾಕ್ಟರ್ ಪಲ್ಟಿಯಾಗಿ ಸ್ಥಳದಲ್ಲಿಯೇ ನಾಲ್ವರು ಸಾವನ್ನಪ್ಪಿದ್ದಾರೆ. ಟ್ರ್ಯಾಕ್ಟರ್ನಲ್ಲಿದ್ದ ಮಹಿಳೆಯರು ಸೇರಿದಂತೆ ಮಕ್ಕಳು ಗಾಯಗೊಂಡಿದ್ದಾರೆ.
ಅಂಗಡಿ ಗೀತಾ (40), ಸೊಪ್ಪಿನ್ ಸುನೀತ (30), ಹೆಗಚ್ಚಿ ಕಾಳಮ್ಮ (50), ಜಕ್ಕಪ್ಪನವರ್ ವೀರಣ್ಣ (35) ಮೃತರು. ಇವರು ಮೂಲತಃ ದಾಸನಹಳ್ಳಿಯವರಾಗಿದ್ದಾರೆ. ಹೂವಿನ ಹಡಗಲಿ ತಾಲೂಕಿನ ದಿರಪ್ಪಿಯಿಂದ ದಾಸನಹಳ್ಳಿಗೆ ಮದುವೆ ಮುಗಿಸಿಕೊಂಡು ಟ್ರ್ಯಾಕ್ಟರ್ನಲ್ಲಿ ಬರುತ್ತಿರುವಾಗ ದುರ್ಘಟನೆ ಸಂಭವಿಸಿದ್ದು, ಮಹಿಳೆಯರು ಸೇರಿದಂತೆ ಮಕ್ಕಳು ಸಹ ಗಾಯಗೊಂಡಿದ್ದಾರೆ.
ಇನ್ನು, ಅಪಘಾತದಲ್ಲಿ ಗಾಯಗೊಂಡವರನ್ನು ಸ್ಥಳೀಯರ ಸಹಾಯದಿಂದ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಹೂವಿನಹಡಗಲಿ ಠಾಣೆಯ ಸಿಪಿಐ ಮಾಲತೇಶ್ ಕೂನಬೇವು ಮತ್ತು ಪೊಲೀಸ್ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.