ಹೊಸಪೇಟೆ:ರಾಜ್ಯದಲ್ಲಿ ಕೊರೊನಾ ಸಲಕರಣೆಯ ಖರೀದಿಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆದಿದೆ. ಹಾಗಾಗಿ ಪ್ರಧಾನಿ ನರೇಂದ್ರ ಮೋದಿ ಅವರು ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕು ಎಂದು ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಆಗ್ರಹಿಸಿದರು.
ನಗರದಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಯಡಿಯೂರಪ್ಪ ಅವರ ನೇತೃತ್ವದ ಸರ್ಕಾರ ಕೊರೊನಾ ಸಲಕರಣೆಯ ಖರೀದಿಯಲ್ಲಿ 2,000 ಕೋಟಿ ರೂ. ಹಗರಣ ಮಾಡಿದೆ. ಸಿಎಂ ಕುಟುಂಬ ಸದಸ್ಯರಿಗೆ ಬಿಡಿಎ ಗುತ್ತಿಗೆದಾರರೊಬ್ಬರು ಆರ್‌ಟಿಜಿಎಸ್ ಮೂಲಕ 7.4 ಕೋಟಿ ರೂ. ಹಣ ಪಾವತಿಸಲಾಗಿದೆ. ಅಲ್ಲದೇ, ಕೋಲ್ಕತ್ತಾದಿಂದ ಸೆಲ್ ಕಂಪನಿಗಳ ಮೂಲಕ 5.4 ಕೋಟಿ ರೂ. ಹಣ ಸಂದಾಯವಾಗಿದೆ. ಆದರೆ, ಆರ್ಎಸ್ಎಸ್ನವರು ಮೌನಕ್ಕೆ ಶರಣಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಉತ್ತರಪ್ರದೇಶದಲ್ಲಿ ಅಲ್ಲಿನ ಸಿಎಂ ಯೋಗಿ ಆದಿತ್ಯನಾಥ್ ಸರ್ಕಾರ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ವಿಫಲವಾಗಿದೆ. ಯುವತಿ ಮನೀಷಾ ವಾಲ್ಮೀಕಿ ಅತ್ಯಾಚಾರದಲ್ಲಿ ಸಿಎಂ ಯೋಗಿ ಆದಿತ್ಯನಾಥ್ ಹಾಗೂ ಪ್ರಧಾನಿ ಬೆಂಬಲಿಗರೇ ಭಾಗಿಯಾಗಿದ್ದಾರೆ. ಸಂತ್ರಸ್ತೆ ಕುಟುಂಬದ ಹಿತ ಕಾಪಾಡುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ದೂರಿದರು.
ವಾಲ್ಮೀಕಿ ಸಮಾಜದ ವಿರುದ್ಧವಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ನಡೆದುಕೊಳ್ಳುತ್ತಿವೆ. ಅಯೋಧ್ಯೆಯಲ್ಲಿ ರಾಮ ಮಂದಿರ ಭೂಮಿ ಪೂಜೆ ವೇಳೆ ಪ್ರಧಾನಮಂತ್ರಿ ಅವರು ಮಹರ್ಷಿ ವಾಲ್ಮೀಕಿ ಅವರ ಹೆಸರು ಸ್ಮರಿಸಲಿಲ್ಲ. ರಾಜ್ಯ ಸರ್ಕಾರ ವಾಲ್ಮೀಕಿ ಸಮಾಜಕ್ಕೆ 7.5 ರಷ್ಟು ಮೀಸಲು ನೀಡುತ್ತಿಲ್ಲ. ಇನ್ನೂ ವಾಲ್ಮೀಕಿ ಸಮಾಜದ ಹೆಣ್ಣು ಮಗಳ ಮೇಲೆ ಅತ್ಯಾಚಾರ ನಡೆದರೂ ಸ್ವಾಭಿಮಾನಿ ಶ್ರೀರಾಮುಲು ಹಾಗೂ ಸಂಸದ ದೇವೇಂದ್ರಪ್ಪ ಮೌನಕ್ಕೆ ಶರಣಾಗಿದ್ದಾರೆ ಎಂದು ವ್ಯಂಗ್ಯವಾಡಿದರು.
ಇದೇ ವೇಳೆ ಕಮಲಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ. ಸೋಮಪ್ಪ, ಮುಖಂಡರಾದ ಗುಜ್ಜಲ ನಾಗರಾಜ್, ನಿಂಬಗಲ್ ರಾಮಕೃಷ್ಣ ಇನ್ನಿತರರಿದ್ದರು.