ವಿಜಯನಗರ:ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ಮಾಡುತ್ತಿದ್ದ ವೇಳೆ ಇಬ್ಬರು ಕೂಲಿ ಕಾರ್ಮಿಕರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನಲ್ಲಿ ಎರಡು ಪ್ರತ್ಯೇಕ ಘಟನೆಗಳಲ್ಲಿ ಇಬ್ಬರು ಕಾರ್ಮಿಕರು ಸಾವನ್ನಪ್ಪಿದ್ದಾರೆ.
ತಾಲೂಕಿನ ಹಲಗಾಪುರ ಕೆರೆಯಲ್ಲಿ ಕೆಲಸ ಮಾಡುತ್ತಿದ್ದ ಓಬಳಾಪುರ ಗ್ರಾಮದ ದುರುಗಪ್ಪ (38) ಕೆಲಸ ಮಾಡುವಾಗ ಸುಸ್ತಾಗಿ, ಮರದ ನೆರಳಲ್ಲಿ ವಿಶ್ರಾಂತಿ ತೆಗೆದುಕೊಳ್ಳುವಾಗ ಎದೆನೋವು ಕಾಣಿಸಿಕೊಂಡಿದೆ. ಕೂಡಲೇ ಆಸ್ಪತ್ರೆಗೆ ಕರೆದೊಯ್ದರೂ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ.
ಇನ್ನೊಂದೆಡೆ ಬಾಚಿಗೊಂಡನಹಳ್ಳಿ ಕೆರೆಯಲ್ಲಿ ಚಿಲಗೋಡು ಗ್ರಾಮದ ತಳವಾರ ನಾಗಪ್ಪ (55) ಕೆಲಸ ಮಾಡುವ ವೇಳೆ ಕುಸಿದು ಬಿದ್ದು, ಎದೆನೋವಿನಿಂದ ಸ್ಥಳದಲ್ಲೇ ಅಸುನೀಗಿದ್ದಾರೆ ಎಂದು ತಿಳಿದುಬಂದಿದೆ.
ಎರಡೂ ಗ್ರಾಮ ಪಂಚಾಯಿತಿಗಳ ಪಿಡಿಒಗಳಿಂದ ಎಲ್ಲ ಮಾಹಿತಿ ಪಡೆದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ವರದಿ ಸಲ್ಲಿಸಲಾಗುವುದು ಎಂದು ತಾಲೂಕು ಪಂಚಾಯಿತಿ ಇಒ ರಮೇಶ್ ಮಹಾಲಿಂಗಪುರ ತಿಳಿಸಿದ್ದಾರೆ.
ಇದನ್ನೂ ಓದಿ:ಪಿಯು ಪರೀಕ್ಷೆಯ ಕೊನೆಯ ದಿನ ತಾಯಿ ಕಣ್ತಪ್ಪಿಸಿ ಲವರ್ ಜತೆ ವಿದ್ಯಾರ್ಥಿನಿ ಎಸ್ಕೇಪ್!