ಬಳ್ಳಾರಿ: ರಾಜ್ಯದಲ್ಲಿ ರೈತರ ಆತ್ಮಹತ್ಯೆ ಸರಣಿ ಮುಂದುವರೆದಿದೆ. ಗಣಿನಾಡು ಬಳ್ಳಾರಿ ಜಿಲ್ಲೆಯ ಕುರುಗೋಡು ತಾಲೂಕು ವ್ಯಾಪ್ತಿಯಲ್ಲಿ ಸಾಲಬಾಧೆ ತಾಳಲಾರದೇ ಇಬ್ಬರು ರೈತರು ಕ್ರಿಮಿ ನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ವಿಜಯದಶಮಿಯಂದೇ ಗಣಿ ಜಿಲ್ಲೆಯಲ್ಲಿ ಸಾವಿಗೆ ಶರಣಾದ ಇಬ್ಬರು ರೈತರು - ವಿಮ್ಸ್ ಆಸ್ಪತ್ರೆ ಬಳ್ಳಾರಿ
ಗಣಿನಾಡು ಬಳ್ಳಾರಿ ಜಿಲ್ಲೆಯಲ್ಲಿ ವಿಜಯದಶಮಿ ಹಬ್ಬದಂದೇ ಇಬ್ಬರು ಅನ್ನದಾತರು ಕ್ರಿಮಿನಾಶಕ ಸೇವಿಸಿ ಸಾವಿಗೆ ಶರಣಾಗಿದ್ದಾರೆ.
ಜಿಲ್ಲೆಯ ಕುರುಗೋಡು ತಾಲೂಕಿನ ಕೊಳಗಲ್ಲು ಗ್ರಾಮದ ರೈತ ಸಿಂಧುವಾಳ ವೀರೇಶ (30) ಹಾಗೂ ಮುಷ್ಟಗಟ್ಟೆ ಗ್ರಾಮದ ಹರಿಜನ ಮಾರೆಪ್ಪ (50) ಸಾವಿಗೆ ಶರಣಾದ ರೈತರು. ಕೊಳಗಲ್ಲು ಗ್ರಾಮದ ರೈತ ಸಿಂಧುವಾಳ ವೀರೇಶ (30), ಗುತ್ತಿಗೆ ಆಧಾರದ ಅಡಿಯಲ್ಲಿ ತಮ್ಮ ಎರಡು ಎಕರೆ ಜಮೀನಿನಲ್ಲಿ ಬೆಳೆದಿದ್ದ ಮೆಣಸಿನಕಾಯಿ ಬೆಳೆ ಮೊನ್ನೆ ತಾನೇ ಸುರಿದ ಮಹಾಮಳೆಗೆ ಹಾನಿಗೀಡಾಗಿತ್ತು. ಬೆಳೆಹಾನಿಯಿಂದ ಬೇಸತ್ತ ವೀರೇಶ, ತಮ್ಮ ಹೊಲದಲ್ಲಿ ಕ್ರಿಮಿನಾಶಕ ಸೇವಿಸಿದ್ದಾರೆ. ಕೂಡಲೇ ಅವರನ್ನು ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಅವರಿಗೆ ಪತ್ನಿ ಮತ್ತು ಇಬ್ಬರು ಮಕ್ಕಳಿದ್ದಾರೆ. ಈ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇನ್ನೊಂದೆಡೆ ಕುರುಗೋಡು ತಾಲೂಕಿನ ಮುಷ್ಟಗಟ್ಟೆ ಗ್ರಾಮದ ರೈತ ಹರಿಜನ ಮಾರೆಪ್ಪ (50) ಮನೆಯಲ್ಲಿ ಯಾರೂ ಇಲ್ಲದ ವೇಳೆ ಕ್ರಿಮಿನಾಶಕ ಔಷಧಿ ಸೇವಿಸಿದ್ದು, ಅವರನ್ನು ಕೂಡ ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅಲ್ಲಿ ಅವರು ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದ್ದಾರೆ. ಮುಷ್ಟಗಟ್ಟೆ ಗ್ರಾಮದಲ್ಲಿ 3.5 ಎಕರೆ ಕೃಷಿ ಭೂಮಿ ಹೊಂದಿರುವ ಮಾರೆಪ್ಪ ಎಮ್ಮಿಗನೂರು ಗ್ರಾಮದ ಸಿಂಡಿಕೇಟ್ ಬ್ಯಾಂಕಿನಲ್ಲಿ ರೂ.50,000, ಗೆಣಿಕೆಹಾಳು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ರೂ. 36,000 ಬೆಳೆ ಸಾಲ ಪಡೆದಿದ್ದಾರೆ. ಈ ಕುರಿತು ಕುರುಗೋಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.