ಬಳ್ಳಾರಿ:ಜಿಲ್ಲೆಯಾದ್ಯಂತ ಮಂಗಳವಾರ ಸಂಜೆ ಗುಡುಗು ಸಹಿತ ಮಳೆಯಾಗಿದೆ. ಹೊಲದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಸಿಡಿಲು ಬಡಿದು ಇಬ್ಬರು ರೈತರು ಸಾವನ್ನಪ್ಪಿರುವ ಘಟನೆ ಸಂಡೂರು ತಾಲೂಕಿನಲ್ಲಿ ನಡೆದಿದೆ.
ತಾಲೂಕಿನ ಬೊಮ್ಮಲಗುಂಡ ಗ್ರಾಮದ ನಾಗಪ್ಪ (70) ಹಾಗೂ ನಾಗೇನಹಳ್ಳಿಯ ಜಾಜರ್ ಕಲ್ಲು ತಿಮ್ಮಣ್ಣ (70) ಮೃತರು. ಹೊಲದಲ್ಲಿ ಕೆಲಸ ಮಾಡುವಾಗ ಸಿಡಿಲು ಬಡಿದಿದೆ. ಈ ವೇಳೆ ನಾಗಪ್ಪ ಅವರ ಮೇಕೆಯೂ ಸಿಡಿಲಿಗೆ ಬಲಿಯಾಗಿದೆ ಎಂದು ತಿಳಿದು ಬಂದಿದೆ. ಮಂಗಳವಾರ ಸಂಜೆ ಸಂಡೂರು ಪಟ್ಟಣ ಹಾಗೂ ಚೋರನೂರು ಹೋಬಳಿಯಲ್ಲಿ ಉತ್ತಮ ಮಳೆಯಾಗಿದೆ. ಕೃಷಿ ಹಾನಿಯ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.