ಬಳ್ಳಾರಿ : ಬಾಲಕರಿಬ್ಬರು ಬಹಿರ್ದೆಸೆಗೆಂದು ಹೋದಾಗ ಆಕಸ್ಮಿಕವಾಗಿ ಕಾಲು ಜಾರಿ ನೀರಿಗೆ ಬಿದ್ದು ಮೃತಪಟ್ಟಿರುವ ಘಟನೆ ಜಿಲ್ಲೆಯ ಕುರುಗೋಡು ತಾಲೂಕಿನ ಗುತ್ತಿಗನೂರು ಗ್ರಾಮದ ಸಮೀಪದ ಹಳ್ಳದಲ್ಲಿ ನಡೆದಿದೆ. ಗ್ರಾಮದ ಚೌಡಿಕಿ ಕುಟುಂಬಕ್ಕೆ ಸೇರಿದ ಮಣಿಕಂಠ (14) ಮತ್ತು ಹರ್ಷವರ್ಧನ (9) ಸಾವಿಗೀಡಾದ ಬಾಲಕರು. ಇವರು ಒಂದೇ ಕುಟುಂಬಕ್ಕೆ ಸೇರಿದ ಸಹೋದರರು. ಒಬ್ಬ ಬೈಲೂರಿನಲ್ಲಿಯೂ, ಮತ್ತೊಬ್ಬ ಬಳ್ಳಾರಿಯಲ್ಲೂ ವಿದ್ಯಾಭ್ಯಾಸ ಮಾಡುತ್ತಿದ್ದರು. ಗ್ರಾಮದಲ್ಲಿ ನಡೆದ ಅಂಬಾದೇವಿ ಜಾತ್ರೆಗೆ ಬಾಲಕರು ಬಂದಿದ್ದರು ಎಂದು ತಿಳಿದುಬಂದಿದೆ.
ಈ ಕುಟುಂಬದಲ್ಲಿ ಒಟ್ಟು ಮೂವರು ಸಹೋದರರಿದ್ದು, ಮೂವರೂ ಸೇರಿ ಬಹಿರ್ದೆಸೆಗೆಂದು ಹಳ್ಳದ ಹತ್ತಿರ ಹೋದಾಗ ಕಾಲು ಜಾರಿ ಹಳ್ಳಕ್ಕೆ ಬಿದ್ದಿದ್ದಾರೆ. ಮೊದಲ ಮಗ ಮಣಿಕಂಠ ಮತ್ತು ಮೂರನೇ ಮಗ ಹರ್ಷವರ್ಧನ್ ಹಳ್ಳದಲ್ಲಿ ಮುಳುಗಿ ಮೃತಪಟ್ಟರೆ, ಮತ್ತೋರ್ವ ಹುಡುಗ ಬದುಕುಳಿದಿದ್ದಾನೆ. ಕುರುಗೋಡು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಬಾಲಕರ ಸಾವಿನಿಂದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.
ಧಾರವಾಡ ಜಿಲ್ಲೆ ಸೇರಿದಂತೆ ಬೇರೆ ಬೇರೆ ಜಿಲ್ಲೆಗಳಲ್ಲಿ ಮನೆ ಹಾಗೂ ವಾಹನಗಳನ್ನು ಕಳ್ಳತನ ಮಾಡುತ್ತಿದ್ದ ಕಳ್ಳರ ತಂಡವನ್ನು ಸೆರೆ ಹಿಡಿಯುವಲ್ಲಿ ಹುಬ್ಬಳ್ಳಿಯ ಗೋಕುಲ್ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ. ಹುಬ್ಬಳ್ಳಿಯ ವಿಮಾನ ನಿಲ್ದಾಣದ ಬಳಿಯಲ್ಲಿ ನಂಬರ್ ಪ್ಲೇಟ್ ಇಲ್ಲದೇ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಕಾರು ತಡೆದು ಪರಿಶೀಲನೆ ಮಾಡಿದಾಗ ನಾಲ್ವರು ಕಳ್ಳರು ಬಲೆಗೆ ಬಿದ್ದಿದ್ದಾರೆ.
ಹು-ಧಾ ನಗರದ 8 ಕಡೆಗಳಲ್ಲಿ, ಬೆಳಗಾವಿ ಶಹರದಲ್ಲಿ 1 ಕಡೆ, ಕೊಪ್ಪಳ ಜಿಲ್ಲೆಯಲ್ಲಿ 1 ಕಡೆ ಸೇರಿದಂತೆ ರಾಜ್ಯದ ವಿವಿಧೆಡೆಗಳಲ್ಲಿ ಇವರು ಕೈಚಳಕ ತೋರಿಸಿದ್ದಾರೆ. ಬಂಧಿತರಿಂದ 300 ಗ್ರಾಂ ಬಂಗಾರ, 2 ಲಾರಿ ಹಾಗೂ ಕಾರು ಸೇರಿದಂತೆ ಒಟ್ಟು 53,10,000 ಮೌಲ್ಯದ ಸಾಮಗ್ರಿಗಳನ್ನು ವಶಕ್ಕೆ ಪಡೆದು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಅಬಕಾರಿ ಇನ್ಸ್ಪೆಕ್ಟರ್ ಲೋಕಾಯುಕ್ತ ಬಲೆಗೆ:ವೈನ್ಸ್ ಶಾಪ್ ಮಾಲೀಕನಿಂದ ಹಣ ಪಡೆಯುವಾಗ ಅಬಕಾರಿ ಇನ್ಸ್ಪೆಕ್ಟರ್ ಲೋಕಾಯುಕ್ತ ಬಲೆಗೆ ಬಿದ್ದಿರುವ ಘಟನೆ ರಾಯಚೂರು ಜಿಲ್ಲೆಯ ಸಿರವಾರ ತಾಲೂಕಿನ ಮಲ್ಲಟ್ ಗ್ರಾಮದ ಬಳಿ ನಡೆದಿದೆ. ದೇವದುರ್ಗ, ಮಾನ್ವಿ ಅಬಕಾರಿ ಇನ್ಸ್ಪೆಕ್ಟರ್ ಬಸವರಾಜ್ ಕಾಕರಗಲ್ ಆರೋಪಿಯಾಗಿದ್ದಾರೆ. ಸಿರವಾರ ವೈನ್ಸ್ ಶಾಪ್ ಮಾಲೀಕ ಹನುಮಂತ ಎಂಬವರಿಂದ ಹಣ ಪಡೆಯುವಾಗ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದರು.
ವಿದ್ಯುತ್ ಶಾರ್ಟ್ ಸರ್ಕ್ಯೂಟ್ನಿಂದ ಹೊತ್ತಿ ಉರಿದ ಗ್ಯಾರೇಜ್ ಹೊತ್ತಿ ಉರಿದ ಗ್ಯಾರೇಜ್:ವಿದ್ಯುತ್ ಶಾರ್ಟ್ ಸರ್ಕ್ಯೂಟ್ನಿಂದಾಗಿ ಗ್ಯಾರೇಜ್ನಲ್ಲಿ ಬೆಂಕಿ ಅವಘಡ ಸಂಭವಿಸಿದೆ. ಅಗ್ನಿ ಅನಾಹುತದಲ್ಲಿ ಎರಡು ಬೈಕ್ಗಳು ಸೇರಿದಂತೆ ಸಾವಿರಾರು ರೂಪಾಯಿ ಮೌಲ್ಯದ ವಸ್ತುಗಳು ಬೆಂಕಿಗಾಹುತಿಯಾಗಿವೆ. ದೊಡ್ಡಬಳ್ಳಾಪುರ ತಾಲೂಕಿನ ಗುಂಡಮಗೆರೆ ಬಳಿ ಘಟನೆ ನಡೆದಿದ್ದು, ನಾಗರಾಜ್ ಎನ್ನುವವರಿಗೆ ಸೇರಿದ ಗ್ಯಾರೇಜ್ ಇದಾಗಿತ್ತು. ಕಳೆದ ರಾತ್ರಿ ಬೆಂಕಿ ತಗುಲಿದ್ದು, ಎರಡು ದ್ವಿಚಕ್ರ ವಾಹನ ಸುಟ್ಟು ಕರಕಲಾಗಿದೆ. ಇದರ ಜೊತೆಗೆ ಗ್ಯಾರೇಜ್ನಲ್ಲಿದ್ದ ಸಾವಿರಾರು ರೂಪಾಯಿ ಮೌಲ್ಯದ ವಸ್ತುಗಳು ನಾಶವಾಗಿವೆ ಎಂದು ತಿಳಿದುಬಂದಿದೆ.
ಬಟ್ಟೆ ತೊಳೆಯಲು ಹೋಗಿ ಇಬ್ಬರು ಸಾವು:ಬಟ್ಟೆ ತೊಳೆದುಕೊಂಡು ಸ್ನಾನ ಮಾಡಲೆಂದು ಹೋಗಿದ್ದ ಇಬ್ಬರು ಕಾಲುವೆಯಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಪಟ್ಟಣದ ಹಡಲಗೇರಿ ಸೀಮೆ ವ್ಯಾಪ್ತಿಯ ಕೆ.ಬಿ.ಜೆ.ಎನ್.ಎಲ್ ಕಾಲುವೆಯಲ್ಲಿ ಗುರುವಾರ ನಡೆದಿದೆ. ಪಟ್ಟಣದ ಬಿಲಾಲ್ ಚಿಕನ್ ಸೆಂಟರ್‌ನಲ್ಲಿ ಕೆಲಸ ಮಾಡುತ್ತಿದ್ದ ರಬಕವಿ ತಾಲೂಕಿನ ಚಿಮ್ಮಡದ ರಸೂಲ್ ಮಾಲದಾರ(25), ಸಮೀವುಲ್ಲಾ ಗೊಳಸಂಗಿ(9) ಕಾಲುವೆಯಲ್ಲಿ ಮುಳುಗಿ ಮೃತಪಟ್ಟಿರುವ ದುರ್ದೈವಿಗಳು. ಇವರಿಬ್ಬರು ಬುಧವಾರ ಸಂಜೆಯೇ ಸ್ನಾನ ಮಾಡಲೆಂದು ಕಾಲುವೆಗೆ ಇಳಿದಿದ್ದಾರೆ. ನೀರಿನ ಹರಿವು ಹೆಚ್ಚಾಗಿದ್ದ ಕಾರಣ ಕಾಲುವೆಯಲ್ಲಿ ಜಾರಿ ನೀರಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.
ಇದನ್ನೂ ಓದಿ:ಬೆಂಗಳೂರಲ್ಲಿ ಡಂಬಲ್ಸ್ನಿಂದ ಹೊಡೆದು ಪತ್ನಿ ಕೊಂದು ಪೊಲೀಸರಿಗೆ ಕರೆ ಮಾಡಿದ ಗಂಡ