ವಿಜಯನಗರ: ಇತ್ತೀಚೆಗೆ ಪ್ರೀತಿ ನಿರಾಕರಿಸಿದ ಯುವತಿಯನ್ನ ಭೀಕರವಾಗಿ ಹತ್ಯೆಗೈದಿದ್ದ ಪ್ರಕರಣ ಇಡೀ ಜಿಲ್ಲೆಯನ್ನೇ ಬೆಚ್ಚಿಬೀಳಿಸಿತ್ತು. ಯುವತಿ ಕೊಲೆಗೈದು ಜೈಲು ಸೇರಿದ ಪಾಗಲ್ ಪ್ರೇಮಿ ವಿರುದ್ಧ ಅಪ್ರಾಪ್ತ ಬಾಲಕಿಯನ್ನ ಮದುವೆಯಾಗಿರುವ ಮತ್ತೊಂದು ಪ್ರಕರಣ ದಾಖಲಾಗಿದೆ. ಮತ್ತೊಂದೆಡೆ ಪಾಗಲ್ ಪ್ರೇಮಿಯ ತಂದೆ-ತಾಯಿ ಕೂಡ ಈಗ ಜೈಲು ಸೇರಬೇಕಾಗಿದೆ.
ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಕನ್ನಿ ಬೋರಯ್ಯನಹಟ್ಟಿ ಗ್ರಾಮದಲ್ಲಿ ನಡೆದ ಯುವತಿಯ ಬರ್ಬರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಕೈಗೊಂಡ ಪೊಲೀಸ್ ತಂಡಕ್ಕೆ ಮತ್ತೊಂದು ಮಾಹಿತಿ ಸಿಕ್ಕಿದೆ. ಕೊಲೆ ಪ್ರಕರಣದಲ್ಲಿ ಪ್ರಮುಖ ಆರೋಪಿ ಬೋಜರಾಜ್ಗೆ ಸಹಕರಿಸಿದ ಆತನ ತಂದೆ ಬಸಣ್ಣ ಮತ್ತು ಭೋಜರಾಜನಿಗೆ ಅಪ್ರಾಪ್ತೆಯನ್ನು ಮದುವೆ ಮಾಡಿಸಿದ್ದ ತಾಯಿ ಕರಿಬಸಮ್ಮ ಈಗ ಜೈಲು ಪಾಲಾಗಿದ್ದಾರೆ. ಹೊಸಹಳ್ಳಿ ಪೊಲೀಸರು ಈ ಇಬ್ಬರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.