ಬಳ್ಳಾರಿ:ತುಂಗಭದ್ರಾ ಜಲಾಶಯದಿಂದ ಮಾ.31ರವರೆಗೆ ಕಾಲುವೆಗಳ ಮೂಲಕ ಬೇಸಿಗೆ ಬೆಳೆಗೆ ನೀರು ಬಿಡಲು ಐಸಿಸಿ ಸಭೆಯಲ್ಲಿ ತಿರ್ಮಾನಿಸಲಾಗಿತ್ತು. ಆದರೆ, ಬದಲಾದ ಕಾಲಘಟ್ಟದಲ್ಲಿ ಬೆಳೆಗಳಿಗೆ ಅನುಕೂಲವಾಗುವಂತೆ ಏ.10ರವರೆಗೆ ನೀರು ಹರಿಬಿಡುವಂತೆ ಅಧಿಕಾರಿಗಳಿಗೆ ಮನವಿ ಮಾಡಿಕೊಂಡಿದ್ದು, ಅಧಿಕಾರಿಗಳು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆಂದು ತುಂಗಭದ್ರಾ ರೈತ ಸಂಘದ ಅಧ್ಯಕ್ಷ ಜಿ. ಪುರುಷೋತ್ತಮಗೌಡ ಹೇಳಿದ್ದಾರೆ.
ನಗರದಲ್ಲಿರುವ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಏ.10ರವರೆಗೆ ನೀರು ಬಿಡದಿದ್ದರೆ ಬಳ್ಳಾರಿ, ಕೊಪ್ಪಳ ಮತ್ತು ರಾಯಚೂರು ಜಿಲ್ಲೆಗಳ ರೈತರಿಗೆ ತೊಂದರೆಯಾಗಲಿದೆ. ಬಿರು ಬೇಸಿಗೆ ಬೆಳೆಗಳಿಗೆ ನೀರಿನ ಅಭಾವ ಎದುರಾಗಿ ಬೆಳೆಗಳೆಲ್ಲ ಸಂಪೂರ್ಣ ಒಣಗಿ ಹೋಗಲಿವೆ. ಹೀಗಾಗಿ ಕಾಡಾ ಅಧ್ಯಕ್ಷ ತಿಪ್ಪೇರುದ್ರಸ್ವಾಮಿ, ಉಸ್ತುವಾರಿ ಸಚಿವ ಆನಂದ ಸಿಂಗ್ ಅಲ್ಲದೆ ತುಂಗಭದ್ರಾ ಮಂಡಳಿ ಮತ್ತು ಬೋರ್ಡ್ ಅಧಿಕಾರಿಗಳನ್ನು ಭೇಟಿಯಾಗಿ ಮನವಿ ಸಲ್ಲಿಸಲಾಗಿದ್ದು, ಅಧಿಕಾರಿಗಳು ಏ.10ರವರೆಗೆ ನೀರು ಬಿಡುವುದಕ್ಕೆ ಮೌಖಿಕ ಒಪ್ಪಿಗೆ ನೀಡಿದ್ದಾರೆ. ಲಿಖಿತ ಒಪ್ಪಿಗೆಯನ್ನ ಕೂಡ ಶೀಘ್ರದಲ್ಲೇ ನೀಡಲಿದ್ದಾರೆ ಎಂದರು.