ಬಳ್ಳಾರಿ:ಹೈದರಾಬಾದ್ ಕರ್ನಾಟಕ ಭಾಗದ ರೈತರ ಜೀವನಾಡಿಯಾಗಿರುವ ತುಂಗಭದ್ರಾ ಜಲಾಶಯಕ್ಕೆ ಕಳೆದೊಂದು ವಾರದಲ್ಲೇ ಒಳಹರಿವು ಗಣನೀಯ ಪ್ರಮಾಣದಲ್ಲಿ ಏರಿಳಿತ ಕಂಡಿದೆ.
ಜುಲೈ 9ರಂದು 14,911 ಕ್ಯೂಸೆಕ್ ನೀರು, 10ರಂದು 12,875 ಕ್ಯೂಸೆಕ್ ನೀರು ಹರಿದು ಬಂದಿದ್ದು, ಮೊದಲ ದಿನಕ್ಕಿಂತಲೂ ಎರಡನೇ ದಿನ 2,036 ಕ್ಯೂಸೆಕ್ನಷ್ಟು ಒಳಹರಿವು ತಗ್ಗಿದೆ. 11ರಂದು 12,932 ಕ್ಯೂಸೆಕ್ನಷ್ಟು ಒಳಹರಿವು ಇದ್ದು, ಕೇವಲ 57 ಕ್ಯೂಸೆಕ್ನಷ್ಟು ಒಳ ಹರಿವು ಹೆಚ್ಚಿದೆ. ನಾಲ್ಕನೇ (12ರಂದು) ದಿನಕ್ಕೆ ಅಂದಾಜು 20,560 ಕ್ಯೂಸೆಕ್ನಷ್ಟು ನೀರು ಹರಿದುಬಂದಿದ್ದು, 7628 ಕ್ಯೂಸೆಕ್ ನೀರು ಒಳಹರಿವು ಹೆಚ್ಚಿದೆ. ಐದನೇ ದಿನಕ್ಕೆ (13 ರಂದು) ಅಂದಾಜು 26,945 ಕ್ಯೂಸೆಕ್ ನೀರು ಹರಿದುಬಂದಿದೆ. ಆರನೇ ದಿನಕ್ಕೆ (14ರಂದು) 20,061 ಕ್ಯೂಸೆಕ್ ನೀರು ಹರಿದುಬಂದಿದೆ. ಏಳನೇ ದಿನಕ್ಕೆ (15ರಂದು) ಕೇವಲ 15,026 ಕ್ಯೂಸೆಕ್ ನೀರು ಬಂದಿದೆ.
ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನ ಮಳೆ ಶುರುವಾಗಿ ಒಂದೂವರೆ ತಿಂಗಳಾದ್ರೂ ಸಮರ್ಪಕ ಮಳೆ ಸುರಿದಿಲ್ಲ. ಈವರೆಗೂ ಕೇವಲ 10ರಷ್ಟು ಮಾತ್ರ ಬಿತ್ತನೆ ಕಾರ್ಯವಾಗಿದೆ. ಉಳಿದಂತೆ ಮಳೆಯಿಲ್ಲ, ಬಿತ್ತನೆಯಿಲ್ಲ. ಜಲಾಶಯಕ್ಕಾದರೂ ನೀರು ಬಂದಿದೆಯಾ ಎಂದುಕೊಂಡರೆ ಅದೂ ಇಲ್ಲ. ಬಳ್ಳಾರಿ, ಕೊಪ್ಪಳ ಹಾಗೂ ರಾಯಚೂರು ಜಿಲ್ಲೆಯ ರೈತರು ಹಾಗೂ ನೆರೆಯ ಆಂಧ್ರ ಹಾಗೂ ತೆಲಂಗಾಣದ ರೈತರು ಇದೇ ಟಿಬಿ ಡ್ಯಾಂ ನೀರು ನಂಬಿದ್ದಾರೆ.