ವಿಜಯನಗರ: ಹಂಪಿಯ ಕೆಲ ಸ್ಮಾರಕಗಳನ್ನು ಇನ್ಮುಂದೆ ಹೊಸಪೇಟೆಯಲ್ಲೇ ನೋಡಬಹುದು. ಥೇಟ್ ಹಂಪಿ ಮಾದರಿಯಲ್ಲಿಯೇ ಸ್ಮಾರಕಗಳು ಕಾಣ ಸಿಗಲಿವೆ. ಹೌದು, ಹೊಸಪೇಟೆ ನಗರದ ರೈಲು ನಿಲ್ದಾಣಕ್ಕೆ ಪಾರಂಪರಿಕ ಸ್ಪರ್ಶ ನೀಡುವುದರ ಮೂಲಕ ಹೊಸ ರೂಪ ಕೊಡಲಾಗುತ್ತಿದೆ. ರೈಲ್ವೆ ನಿಲ್ದಾಣದ ದ್ವಾರ ಕೆಡವಿ ಹೊಸ ರೂಪ ಕೊಡಲಾಗುತ್ತಿದೆ.
ನಿಲ್ದಾಣದ ಮುಖ್ಯ ಪ್ರವೇಶ ದ್ವಾರವನ್ನು ಹಂಪಿ ಕಲ್ಲಿನ ರಥದ ಮಾದರಿಯಲ್ಲಿ ನಿರ್ಮಿಸಿರುವುದು ಇದರ ವಿಶೇಷ. ಇನ್ನು, ಸುಂದರ ಕೆತ್ತನೆಯ ಕಲ್ಲುಗಳನ್ನು ಬಳಸಿಕೊಂಡು ರೈಲ್ವೆ ನಿಲ್ದಾಣಕ್ಕೆ ಹೊಸ ರೂಪ ಕೊಡುವುದರಿಂದ ಪಾರಂಪರಿಕ ಶೈಲಿಯ ಕಟ್ಟಡದಂತೆ ಭಾಸವಾಗುತ್ತಿದೆ. ನಿರ್ಮಾಣ ಕಾರ್ಯ ಪೂರ್ಣಗೊಂಡಿದ್ದು, ಅಂತಿಮ ಹಂತದ ಕೆಲಸ ಪ್ರಗತಿಯಲ್ಲಿದೆ.
ಹೊಸಪೇಟೆ ರೈಲು ನಿಲ್ದಾಣಕ್ಕೆ ಹೊಸ ಸ್ಪರ್ಶ ಹಂಪಿ ವಿಶ್ವ ಪರಂಪರೆ ತಾಣಗಳ ಪಟ್ಟಿಯಲ್ಲಿದೆ. ಇಲ್ಲಿನ ವಾಸ್ತುಶಿಲ್ಪ ಕಲೆ, ಸ್ಮಾರಕಗಳ ಸೊಬಗು ದೇಶ - ವಿದೇಶಿಗರ ಕಣ್ಮನ ಸೆಳೆಯುತ್ತದೆ. ಗ್ರಾನೈಟ್ ಕಲ್ಲುಗಳ ಮೂಲಕ ಹಂಪಿಯ ಕಲ್ಲಿನ ರಥವನ್ನೇ ಹೋಲುವಂತೆ ಮಹಾ ದ್ವಾರ ನಿರ್ಮಾಣ ಮಾಡಲಾಗಿದ್ದು, ರೈಲ್ವೆ ನಿಲ್ದಾಣದ ಗೋಡೆಗಳ ಮೇಲೂ ಹಂಪಿ ಸ್ಮಾರಕಗಳ ಪರಂಪರೆ ಬಿಂಬಿಸುವ ಪ್ರಯತ್ನ ಮಾಡಲಾಗಿದೆ.
ಇದನ್ನೂ ಓದಿ:ಮಾರುಕಟ್ಟೆ ಮಾಹಿತಿ.. ಇಂದಿನ ತರಕಾರಿ ದರ ಹೀಗಿದೆ ನೋಡಿ
ಇದಕ್ಕೆ 8 ಕೋಟಿ ರೂಪಾಯಿ ಮೀಸಲಿರಿಸಲಾಗಿದೆ. ರೈಲ್ವೆ ಇಲಾಖೆ 4 ಕೋಟಿ ರೂಪಾಯಿ ಮೊತ್ತವನ್ನು ಹಾಗೂ ಇನ್ನುಳಿದ 4 ಕೋಟಿ ರೂಪಾಯಿಯನ್ನು ಪ್ರವಾಸೋದ್ಯಮ ಇಲಾಖೆ ಒದಗಿಸಿದೆ. ಈಗ ಹೆಚ್ಚಿನ ಕಾಮಗಾರಿ ಮುಗಿದಿದೆ. ಹಂಪಿ ಸ್ಮಾರಕಗಳ ಮಾದರಿಯಲ್ಲೇ ರೈಲ್ವೆ ನಿಲ್ದಾಣದ ಕಟ್ಟಡವನ್ನು ಅರಳಿಸಿರುವ ಹಿನ್ನೆಲೆಯಲ್ಲಿ ಹೊಸಪೇಟೆ ರೈಲ್ವೆ ನಿಲ್ದಾಣಕ್ಕೆ ಆಗಮಿಸುವ ಪ್ರವಾಸಿಗರು ಕೂಡ ನಿಲ್ದಾಣ ಕಂಡು ಆಕರ್ಷಿತರಾಗುತ್ತಿದ್ದಾರೆ.