ಬಳ್ಳಾರಿ: ಕಳೆದ ಎರಡು ವಾರಗಳ ಹಿಂದೆ ಬೀದಿ ನಾಯಿಗಳ ದಾಳಿಯಿಂದ ಗಂಭೀರವಾಗಿ ಗಾಯಗೊಂಡ ಬಾಲಕಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾಳೆ. ನಗರದ 31ನೇ ವಾರ್ಡ್ನ ವಟ್ಟಪ್ಪಗೇರೆ ನಿವಾಸಿ ಕಿಜರ್ ಅವರ ಪುತ್ರಿ ತಯ್ಯಬಾ(3) ಮೃತಳು. ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. 18 ದಿನಗಳ ಕಾಲ ಸಾವು-ಬದುಕಿನ ಹೋರಾಟ ನಡೆಸಿದ ಬಾಲಕಿ ನಿನ್ನೆ(ಶನಿವಾರ) ಸಾವನ್ನಪ್ಪಿದ್ದಾಳೆ.
ಬಳ್ಳಾರಿ ಗ್ರಾಮೀಣ ಶಾಸಕ ಬಿ.ನಾಗೇಂದ್ರ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುವಿನ ಯೋಗಕ್ಷೇಮ ವಿಚಾರಿಸಿದ್ದರು. ಪಾಲಿಕೆ ಮೇಯರ್ ರಾಜೇಶ್ವರಿ ಕೂಡ ಸಾಂತ್ವನ ಹೇಳಿದ್ದರು. ಜಿಲ್ಲೆಯಲ್ಲಿ ಈವರೆಗೆ ಬೀದಿ ನಾಯಿಗಳ ದಾಳಿಯಿಂದ ಮಕ್ಕಳು, ಮಹಿಳೆಯರು ಹಾಗೂ ಪುರುಷರು ಸೇರಿದಂತೆ ಅಂದಾಜು 30 ಜನರು ಗಾಯಗೊಂಡಿದ್ದಾರೆ. ಇವರಿಗೆ ವಿಜಯನಗರ ವೈದ್ಯ ವಿಜ್ಞಾನ ಸಂಸ್ಥೆ (ವಿಮ್ಸ್)ಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.
ಇದನ್ನೂ ಓದಿ:5 ವರ್ಷದ ಬಾಲಕನ ಮೇಲೆ ಬೀದಿ ನಾಯಿ ದಾಳಿ; ಪ್ರಾಣಾಪಾಯದಿಂದ ಪಾರು
ಬಾಲಕನ ಕಚ್ಚಿದ ನಾಯಿ: ಮನೆಯ ಮುಂಭಾಗ ಆಟವಾಡುತ್ತಿದ್ದ ಬಾಲಕನ ಮೇಲೆ ಬೀದಿ ನಾಯಿ ದಾಳಿ ನಡೆಸಿರುವ ಘಟನೆ ಇತ್ತೀಚೆಗೆ ಬೆಳಗಾವಿಯಲ್ಲಿ ನಡೆದಿತ್ತು. ಗಾಯಾಳುವಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ಪಾಲಿಕೆ ಮಾಜಿ ಸದಸ್ಯ ವಿನಾಯಕ ಗುಂಜಟ್ಕರ್ ಈ ಕುರಿತು ಮಾತನಾಡಿ, "ನಗರದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದೆ. ಈ ಕುರಿತು ಹಲವು ಬಾರಿ ಪಾಲಿಕೆಯ ಅಧಿಕಾರಿಗಳಿಗೆ ಮನವಿ ಮಾಡಿಕೊಂಡರೂ ಕ್ರಮ ಕೈಗೊಂಡಿಲ್ಲ. ಬಾಲಕನ ಕೂಗಾಟ ಕೇಳಿದ ಜನರು ನಾಯಿಯಿಂದ ಬಾಲಕನ ರಕ್ಷಣೆ ಮಾಡಿದ್ದಾರೆ. ಅನಗೋಳದ ಸರ್ಕಾರಿ ಶಾಲೆಯ ಪಕ್ಕದಲ್ಲಿಯೇ ಬೀದಿ ನಾಯಿಗಳು ಹೆಚ್ಚಾಗಿವೆ. ಪಾಲಿಕೆ ಬೀದಿ ನಾಯಿಗಳ ಹಾವಳಿ ತಪ್ಪಿಸಲು ಕ್ರಮ ಕೈಗೊಳ್ಳದಿದ್ದರೆ ಹೋರಾಟ ನಡೆಸಲಾಗುವುದು" ಎಂದು ಎಚ್ಚರಿಕೆ ನೀಡಿದ್ದರು.
16 ಜನರ ಮೇಲೆ ದಾಳಿ: ಹೈದರಾಬಾದ್ನ ಅಂಬರ್ಪೇಟ್ ಎಂಬಲ್ಲಿ ಒಂದೇ ದಿನ 16 ಜನರ ಮೇಲೆ ಬೀದಿ ನಾಯಿ ದಾಳಿ ಆಗಿರುವುದು ಇತ್ತೀಚೆಗೆ ವರದಿಯಾಗಿತ್ತು. ಈ ನಡುವೆ ನಗರದಲ್ಲಿ 5.5 ಲಕ್ಷ ಬೀದಿ ನಾಯಿಗಳಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ:ಒಂದೇ ದಿನ 16 ಜನರ ಮೇಲೆ ಬೀದಿ ನಾಯಿ ದಾಳಿ: ಭಯ ಭೀತರಾಗಿರುವ ಜನರು