ವಿಜಯನಗರ:ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಮೇಲೆ ಇತ್ತೀಚೆಗೆ ನಡೆದ ದುಷ್ಕೃತ್ಯಕ್ಕೆ ಸಂಬಂಧಿಸಿದಂತೆ ಮೂವರು ಕಿಡಿಗೇಡಿಗಳನ್ನು ಪೊಲೀಸರು ಇಂದು ಬಂಧಿಸಿದ್ದಾರೆ. ಬಹುನಿರೀಕ್ಷಿತ 'ಕ್ರಾಂತಿ' ಚಿತ್ರದ ಪ್ರಚಾರ ನಿಮಿತ್ತ ದರ್ಶನ್ ಇದೇ ತಿಂಗಳ 18ರಂದು ಹೊಸಪೇಟೆಗೆ ಆಗಮಿಸಿದ್ದಾಗ ಕೆಲವು ಕಿಡಿಗೇಡಿಗಳು ಅವಮಾನಿಸಿದ್ದರು. ಘಟನೆಯನ್ನು ನಟ ಶಿವರಾಜ್ ಕುಮಾರ್ ಸೇರಿದಂತೆ ಸ್ಯಾಂಡಲ್ವುಡ್ ಸೆಲೆಬ್ರಿಟಿಗಳೆಲ್ಲ ಖಂಡಿಸಿದ್ದರು.
ಘಟನೆಯ ಬಗ್ಗೆ ಕಾರ್ಯಕ್ರಮದ ಆಯೋಜಕರು ಹೊಸಪೇಟೆ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ದೂರಿನನ್ವಯ ಪೊಲೀಸರು ಆರೋಪಿಗಳ ಪತ್ತೆಗೆ ತಂಡಗಳನ್ನು ರಚಿಸಿ ಕಾರ್ಯಾಚರಣೆ ನಡೆಸಿದ್ದರು. ಇದೀಗ ಮೂವರ ಬಂಧನವಾಗಿದೆ. ಬಂಧಿತರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಇನ್ನುಳಿದವರ ಪತ್ತೆಗೆ ಬಲೆ ಬೀಸಲಾಗಿದೆ.
ಅಂದು ನಡೆದಿದ್ದೇನು?:ಡಿಸೆಂಬರ್ 18ರಂದು ನಗರದ ವಾಲ್ಮೀಕಿ ವೃತ್ತದಲ್ಲಿ 'ಕ್ರಾಂತಿ' ಸಿನಿಮಾದ 'ಬೊಂಬೆ.. ಬೊಂಬೆ..' ಹಾಡು ಬಿಡುಗಡೆ ಸಮಾರಂಭವಿತ್ತು. ಈ ಸಂದರ್ಭದಲ್ಲಿ ದರ್ಶನ್ ಅವರ ಪೋಸ್ಟರ್ ಮತ್ತು ಬ್ಯಾನರ್‌ಗಳನ್ನು ಕೆಲವು ಕಿಡಿಗೇಡಿಗಳು ಹರಿದು ಹಾಕಿದ್ದರು. ಘಟನೆಯನ್ನು ನಟ ಸುದೀಪ್ ಕೂಡಾ ಖಂಡಿಸಿ, 'ಬಂಡಾಯ ಯಾವಾಗಲೂ ಸಮಸ್ಯೆಗೆ ಉತ್ತರ ಅಲ್ಲ' ಎಂದು ಟ್ವೀಟ್ ಮಾಡಿದ್ದರು.