ವಿಜಯನಗರ: ಶ್ರಾವಣ ಮಾಸದ ಕಡೆ ಸೋಮವಾರ ಹಿನ್ನೆಲೆಯಲ್ಲಿ ಹಂಪಿ ವಿರೂಪಾಕ್ಷೇಶ್ವರ ಸ್ವಾಮಿಗೆ ವಿದ್ಯಾರಣ್ಯ ಮಠದ ವಿದ್ಯಾರಣ್ಯ ಭಾರತಿ ಸ್ವಾಮೀಜಿ ಅವರು ವಿಶೇಷ ಪೂಜೆ ಸಲ್ಲಿಸಿದರು. ವಿರೂಪಾಕ್ಷೇಶ್ವರ ಸ್ವಾಮಿಗೆ ವಿಶೇಷ ಅಭಿಷೇಕ ಮಾಡಿದ ಶ್ರೀಗಳು ನೈವೇದ್ಯ ನೆರವೇರಿಸಿ, ಮಹಾಮಂಗಳಾರತಿ ಬೆಳಗಿದರು. ನಂತರ ಅರ್ಚಕರು ಶಿವ ಲಿಂಗಕ್ಕೆ ವಿಶೇಷ ಅಲಂಕಾರ ಮಾಡಿದರು. ಈ ವೇಳೆ ಸಾವಿರಾರು ಭಕ್ತರು ದೇವರ ದರ್ಶನ ಪಡೆದರು.
ದೇವರಿಗೆ ಹಣ್ಣು, ಕಾಯಿ, ಹೂ ಸಮರ್ಪಿಸಿದರು. ಪ್ರವಾಸಿ ಮಾರ್ಗದರ್ಶಿಗಳು ಭಕ್ತರಿಗೆ ದಾಸೋಹ ಉಣಬಡಿಸಿದರು. ಬಳ್ಳಾರಿ, ಕೊಪ್ಪಳ, ರಾಯಚೂರು, ದಾವಣಗೆರೆ ಸೇರಿದಂತೆ ನೆರೆಯ ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣದಿಂದಲೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬಂದು ದೇವರ ದರ್ಶನ ಪಡೆದರು. ಬೆಳಿಗ್ಗೆಯಿಂದ ಸಂಜೆಯ ವರೆಗೆ ಭಕ್ತರು ಬಂದು ಹೋಗುವುದು ಕಂಡುಬಂತು.
ಭಕ್ತರ ದಂಡು:ಒಂದೆಡೆ ಶ್ರಾವಣ ಸೋಮವಾರ, ಎರಡನೇ ಶನಿವಾರ ಹಾಗೂ ವಿಕೇಂಡ್ ಭಾನುವಾರ ಸೇರಿ ಮೂರು ದಿನಗಳ ಕಾಲ ರಜೆ ಇರುವುದರಿಂದ ಭಕ್ತರು ಹಾಗೂ ಪ್ರವಾಸಿಗರು ಹಂಪಿಗೆ ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ್ದರು. ಹಂಪಿ ವಿರೂಪಾಕ್ಷೇಶ್ವರ ಸ್ವಾಮಿ ನಂತರ ಕೋದಂಡ ರಾಮಸ್ವಾಮಿ, ಯಂತ್ರೋದಾರಕ ಆಂಜನೇಯ, ಉದ್ದನ ವೀರಭದ್ರ ಸ್ವಾಮಿ ದರ್ಶನ ಪಡೆದರು. ಬಳಿಕ ಕಡಲೆಕಾಳು ಗಣಪ, ಸಾಸಿವೆಕಾಳು ಗಣಪ, ಉಗ್ರನರಸಿಂಹ, ವಿಜಯವಿಠ್ಠಲ ದೇಗುಲ, ಕಲ್ಲಿನ ತೇರು ಸೇರಿ ಇತರ ಪ್ರಮುಖ ಸ್ಮಾರಕಗಳ ಬಳಿ ಭಕ್ತರ ದಂಡು ಕಂಡು ಬಂತು. ಸ್ಮಾರಕಗಳ ಮುಂದೆ ಸೆಲ್ಫಿ ತೆಗೆದುಕೊಂಡು ಪ್ರವಾಸಿಗರು ಖುಷಿಪಟ್ಟರು.