ಬಳ್ಳಾರಿ: ಭೂ ಸುಧಾರಣೆ-ಎಪಿಎಂಸಿ ತಿದ್ದುಪಡಿ ಕಾಯ್ದೆ ಸೇರಿ ಪ್ರಮುಖ ಮೂರು ಕಾಯ್ದೆಗಳಿಗೆ ತಿದ್ದುಪಡಿ ತರುವ ಮುಖೇನ ಜನಮನ್ನಣೆ ಗಳಿಸಿರುವ ಕೇಂದ್ರ ಸರ್ಕಾರದ ವಿರುದ್ಧ ಅಪಪ್ರಚಾರ ಮಾಡೋ ನಿಟ್ಟಿನಲ್ಲಿ ಪ್ರತಿಪಕ್ಷಗಳು ಭಾರತ್ ಬಂದ್ಗೆ ಕರೆ ನೀಡಿರೋದು ನಿಜಕ್ಕೂ ನಾಚಿಕೆಗೇಡಿನ ಸಂಗತಿ ಎಂದು ಬಿಜೆಪಿ ರೈತ ಮೋರ್ಚಾ ರಾಜ್ಯ ಘಟಕದ ಉಪಾಧ್ಯಕ್ಷ ಎಸ್.ಗುರುಲಿಂಗನಗೌಡರು ಆರೋಪಿಸಿದ್ದಾರೆ.
ನಗರದ ಎಸ್ಪಿ ವೃತ್ತದಲ್ಲಿರುವ ಬಿಜೆಪಿ ಕಚೇರಿಯಲ್ಲಿಂದು ನಡೆದ ಮಾಧ್ಯಮಗೋಷ್ಠಿ ಬಳಿಕ ಈಟಿವಿ ಭಾರತದೊಂದಿಗೆ ಮಾತನಾಡಿದ ಗುರುಲಿಂಗನಗೌಡ, ಈ ದಿನ ನಡೆದ ಭಾರತ್ ಬಂದ್ ದುರುದ್ದೇಶಪೂರ್ವಕವಾಗಿದೆ. ಈ ಕಾಯ್ದೆಗಳು ರೈತಾಪಿ ವರ್ಗದವರನ್ನ ಆರ್ಥಿಕವಾಗಿ ಸಬಲೀಕರಣಗೊಳಿಸುವಷ್ಟು ಪೂರಕವಾಗಿವೆ. ಪ್ರತಿಪಕ್ಷಗಳು ಈ ಕಾಯ್ದೆಗಳ ಬಗ್ಗೆ ವೃಥಾ ಅಪಪ್ರಚಾರ ಮಾಡುತ್ತಿವೆ. ಎಪಿಎಂಸಿ ಮಾರುಕಟ್ಟೆ ಸ್ಥಗಿತಗೊಳಿಸಲಾಗುತ್ತೆಂಬ ಅಪಪ್ರಚಾರ ಮಾಡಲಾಗುತ್ತಿದೆ. ಆದರೆ ವಾಸ್ತವವಾಗಿ ಎಪಿಎಂಸಿ ಮಾರುಕಟ್ಟೆ ವ್ಯವಸ್ಥೆಯನ್ನ ಸ್ಥಗಿತಗೊಳಿಸುವ ಕಾರ್ಯಕ್ಕೆ ಕೇಂದ್ರ ಸರ್ಕಾರ ಕೈ ಹಾಕಿಲ್ಲ. ಪ್ರತಿಪಕ್ಷಗಳು ಹಾಗೂ ಕೆಲ ಪಟ್ಟಭದ್ರ ಹಿತಾಸಕ್ತಿ ಉಳ್ಳ ರೈತರನ್ನ ನಮ್ಮ ರೈತಾಪಿ ವರ್ಗ ನಂಬಬಾರದು. ಅವರ ಸ್ವಹಿತಾಸಕ್ತಿಗಾಗಿಯೇ ಇಡೀ ರೈತಾಪಿ ವರ್ಗವನ್ನ ಬಳಸಿಕೊಳ್ಳಲಾಗುತ್ತೆ ಎಂದರು.