ಕರ್ನಾಟಕ

karnataka

By

Published : Mar 3, 2020, 11:06 AM IST

Updated : Mar 3, 2020, 11:52 AM IST

ETV Bharat / state

ರಾಮುಲು ಮಗಳ‌ ಅದ್ಧೂರಿ ಮದುವೆ: ರೆಡ್ಡಿ ಮಾರ್ಗದರ್ಶನದಲ್ಲಿ ಸಂಭ್ರಮದ ತಯಾರಿ: VIDEO

ಮಾಜಿ ಸಚಿವ ಜನಾರ್ದನರೆಡ್ಡಿ ಅವರು ತಮ್ಮ ಮಗಳ ಮದುವೆಯನ್ನು ಅದ್ಧೂರಿಯಾಗಿ ಮಾಡಿ ಮುಗಿಸಿದ್ದರು. ಈಗ ರೆಡ್ಡಿ ಆಪ್ತ ಸಚಿವ ಶ್ರೀರಾಮುಲು ಮಗಳ ಮದುವೆಯನ್ನೂ ಅದೇ ರೀತಿ ಮಾಡಲು ವೇದಿಕೆ ಸಿದ್ಧಗೊಳ್ಳುತ್ತಿದೆ. ಮಾರ್ಚ್ 5 ರಂದು ಬೆಂಗಳೂರು ಅರಮನೆ ಮೈದಾನದಲ್ಲಿ ಸಚಿವರ ಮಗಳ ಮದುವೆ ನಡೆಯಲಿದೆ. ಸಚಿವ ಶ್ರೀರಾಮುಲು ಆಪ್ತರಾದ ಜನಾರ್ದನ ರೆಡ್ಡಿ ಮಾರ್ಗದರ್ಶನದಲ್ಲಿ ವಿವಾಹ ಸಮಾರಂಭ ನಡೆಯಲಿದೆ.

The wedding of Minister Sriramulu's daughter
ಸಚಿವ ಶ್ರೀರಾಮುಲು ಮಗಳ‌ ಅದ್ಧೂರಿ ಮದುವೆ

ಬಳ್ಳಾರಿ: ಸಚಿವ ಶ್ರೀರಾಮುಲು ಪುತ್ರಿ ರಕ್ಷಿತಾ ವಿವಾಹ ಪೂರ್ವ ಕಾರ್ಯಗಳು ಅದ್ಧೂರಿಯಾಗಿ ನಡೆಯುತ್ತಿವೆ. ಮದುವೆ ಆಹ್ವಾನ ಪತ್ರಿಕೆಯನ್ನು ಪ್ರಧಾನಿ ಮೋದಿ ಅವರಿಂದ ಹಿಡಿದು ಸಾಮಾನ್ಯ ಕಾರ್ಯಕರ್ತರಿಗೆ ನೀಡಲು ಬರೋಬ್ಬರಿ ಲಕ್ಷ ಆಹ್ವಾನ ಪತ್ರಿಕೆಗಳನ್ನು ಮುದ್ರಣ ಮಾಡಿ ವಿತರಣೆ ಮಾಡಲಾಗಿದೆ.

ಕರ್ನಾಟಕದ ಖ್ಯಾತ ವೆಡ್ಡಿಂಗ್ ಧ್ರುವ ಅವರ ಸಾರಥ್ಯದಲ್ಲಿ ನವದೆಹಲಿಯಲ್ಲಿ ಈ ಮದುವೆ ಆಹ್ವಾನ ಪತ್ರಿಕೆಗಳು ಡಿಸೈನ್ ಆಗಿವೆ. ಆರೋಗ್ಯ ಸಚಿವರಾಗಿರುವ ಹಿನ್ನೆಲೆ ಆಹ್ವಾನ ಪತ್ರಿಕೆಯಲ್ಲಿ ಆರೋಗ್ಯದ ಕುರಿತ ಥೀಮ್​​ ಇಟ್ಟುಕೊಂಡು ಕೇಸರಿ ಮತ್ತು ಏಲಕ್ಕಿ ಹಾಕಲಾಗಿದೆ. ಅರಿಶಿಣ ಕುಂಕುಮ ಮತ್ತು ಅಕ್ಷತೆಯೂ ಆಹ್ವಾನ ಪತ್ರಿಕೆಯೊಳಗಿದೆ. ಸ್ಯಾಂಡಲ್ ವುಡ್​​ನ ಸ್ಟಾರ್ ಕಾಸ್ಟ್ಯೂಮ್ ಡಿಸೈನರ್ ಸಾನಿಯಾ ಸರ್ದಾರಿಯಾ ಮದುಮಗಳಿಗೆ ಬಟ್ಟೆ ಡಿಸೈನ್ ಮಾಡಿದ್ದಾರೆ.

ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಮದುವೆಯಲ್ಲಿ ಮೇಕ್ ಅಪ್ ಮಾಡಿದವರೇ, ಶ್ರೀರಾಮುಲು ಪುತ್ರಿ ರಕ್ಷಿತಾ ಅವರಿಗೂ ಮೇಕ್ ಅಪ್ ಮಾಡುತ್ತಿದ್ದಾರೆ. ಅಂಬಾನಿ ಮಗನ ಮದುವೆಗೆ ವಿಡಿಯೋ, ಫೋಟೋ ತೆಗೆದ ಜಯರಾಮನ್ ಪಿಳ್ಳೈ, ಅವರ ಜತೆ ದಿಲೀಪ್ ತಮ್ಮ ಕೈಚಳಕ ತೋರಿಸಲಿದ್ದಾರೆ. ಇನ್ನು ಶ್ರೀರಾಮುಲು ಅವರಿಗೆ ಸಿನಿಮಾ ನಟ, ನಟಿಯರೂ ಸಹ ಆತ್ಮೀಯರಾಗಿದ್ದು, ಅವರಿಗೂ ಸಹ ಆಹ್ವಾನ ತಲುಪಿದೆ. 30 ಜಿಲ್ಲೆಯ ಎಲ್ಲ ಅಧಿಕಾರಿಗಳು, ಬಿಜೆಪಿಯ ಎಲ್ಲ ಪದಾಧಿಕಾರಿಗಳು ಇತರ ಪಕ್ಷದ ಸ್ನೇಹಿತರು, ಬಂಧುಗಳಿಗೂ ಆಹ್ವಾನ ಪತ್ರಿಕೆಯನ್ನು ತಲುಪಿಸಲಾಗಿದೆ.

ರಾಮುಲು ಮಗಳ‌ ಅದ್ಧೂರಿ ಮದುವೆ

ರಾಜ್ಯದ 500ಕ್ಕೂ ಹೆಚ್ಚು ಸ್ವಾಮೀಜಿಗಳಿಗೆ ವಿಶೇಷ ಆಹ್ವಾನ ಮಾಡಲಾಗಿದೆ. ಮಾರ್ಚ್ 3ಕ್ಕೆ ಮದುಮಗಳು ರಕ್ಷಿತಾ ಅವರ ಸ್ನೇಹಿತೆಯರಿಗಾಗಿ ಬೆಂಗಳೂರಿನ ತಾಜ್ ವೆಸ್ ಎಂಡ್ ಹೋಟೆಲ್​​ನಲ್ಲಿ ಮೆಹಂದಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸಂಬಂಧಿಕರೆಲ್ಲರಿಗೂ ಪಂಚತಾರ ಹೊಟೇಲ್​​ನಲ್ಲಿ ಅವರ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲಾಗಿದೆ. ವಿಶೇಷ ಎಂದರೆ ಮದುವೆಗೆ ಒಂದು ದಿನ ಮುಂಚಿತವಾಗಿ ಬರುವ ಕಾರ್ಯಕರ್ತರು, ಅಭಿಮಾನಿಗಳು, ಪ್ರಮುಖ ನಾಯಕರಿಗೆ ಕೂಡಾ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲಾಗಿದೆ.

ಶ್ರೀರಾಮುಲು ಅವರ ಅಭಿಮಾನಿಗಳು ಎಲ್ಲ ಜಿಲ್ಲೆಗಳಲ್ಲಿದ್ದು, ಅವರು ಸಹ ತಮ್ಮ ನೆಚ್ಚಿನ ನಾಯಕನ ಮಗಳ ಮದುವೆಗೆ ಬರಲಿದ್ದಾರೆ. ಹಾಗಾಗಿ ಬೆಂಗಳೂರಿನ ನಾಲ್ಕೂ ಮೂಲೆಯಲ್ಲಿ ಕಾರ್ಯಕರ್ತರು, ಅಭಿಮಾನಿಗಳಿಗೆ ಉಳಿಯಲು ವ್ಯವಸ್ಥೆ ಮಾಡಲಾಗಿದೆ. ಅಲ್ಲಿಯೇ ಊಟ, ಹೊದಿಕೆ, ಹಾಸಿಗೆ, ಪೇಸ್ಟ್, ಬ್ರಶ್ ಸೇರಿದಂತೆ ಮೂಲ ಸೌಕರ್ಯಗಳನ್ನು ರೆಡಿ ಮಾಡಿದ್ದಾರೆ. ಮದುವೆಗೆ ರಾಜ್ಯಾದ್ಯಂತ ಸುಮಾರು 500 ಜನ ಸ್ವಾಮೀಜಿಗಳು ಬರುವ ಸಾಧ್ಯತೆ ಇದೆ. ಅವರಿಗೂ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲಾಗಿದೆ. ಮಾರ್ಚ್ 4ರ ರಾತ್ರಿ ಅರಮನೆಯಲ್ಲಿ (ವಸಂತನಗರ ಗೇಟ್) ಲಗ್ನ ಕಟ್ಟಿಸುವುದು, ವರ ಪೂಜೆ, ವಿವಾಹ ಶಾಸ್ತ್ರಗಳು ನಡೆಯಲಿವೆ. ಈ ವೇಳೆ, ಕರ್ನಾಟಕದ ಸಾಂಸ್ಕೃತಿಕ ವಾದ್ಯಗಳ ಮೂಲಕ ವರನನ್ನು ಬರಮಾಡಿಕೊಳ್ಳಲಾಗುವುದು.

ಮಾರ್ಚ್ 5ಕ್ಕೆ ಬೆಳಗ್ಗೆ 7 ರಿಂದ 9 ಗಂಟೆಯವರೆಗೆ ವಿವಾಹ ಮುಹೂರ್ತ ನಿಗದಿಯಾಗಿದೆ. ಇದಕ್ಕಾಗಿ ಮೇಲು ಕೋಟೆಯ ಕಲ್ಯಾಣಿ ಮಾದರಿಯಲ್ಲಿ ರೂಪುಗೊಳ್ಳುತ್ತಿದೆ. ಕಲ್ಯಾಣಿಯ ಮಧ್ಯದಲ್ಲಿ ಮುಹೂರ್ತ ಕಾರ್ಯ ನಡೆಯಲಿದೆ. 4 ಸಾವಿರ ಮಂದಿ ನೋಡುವಂತೆ ವ್ಯವಸ್ಥೆ ಮಾಡಲಾಗಿದೆ. ಇದರಲ್ಲಿ ಹಂಪಿ ವಿರೂಪಾಕ್ಷನ ದೇವಸ್ಥಾನವೂ ಒಂದು. ದೃವ ಜೊತೆಗೆ ಸೆಟ್ ಅಲಂಕಾರಕ್ಕಾಗಿಯೇ 300 ಕಲಾವಿದರು ಕೆಲಸ ಮಾಡಲಿದ್ದಾರೆ. ಜೊತೆಗೆ ಕರ್ನಾಟಕದ 200 ಮಂದಿ ಹೂವಿನ ಅಲಂಕಾರ ಮಾಡಲೆಂದೇ ನಿಯೋಜನೆಗೊಂಡಿದ್ದಾರೆ.

ಅರಮನೆ ಮೈದಾನದ 40 ಎಕರೆ ಜಾಗದಲ್ಲಿ ಅದ್ಧೂರಿ ಸೆಟ್ ನಿರ್ಮಾಣವಾಗುತ್ತಿದೆ. 15 ಎಕರೆ ಪಾರ್ಕಿಂಗ್​​ಗೆ ಮೀಸಲಿಡಲಾಗುತ್ತಿದೆ. 27 ಎಕರೆಯಲ್ಲಿ ಮದುವೆ ಕಾರ್ಯ ನಡೆಯಲಿದೆ. ಮುಹೂರ್ತದ ಸೆಟ್​​​​ನ್ನು ಸುಮಾರು 4 ಎಕರೆಯಲ್ಲಿ ಹಾಕಲಾಗುತ್ತಿದೆ. ಆರತಕ್ಷತೆಗೆ ಮೂರೂವರೆ ಎಕರೆಯನ್ನು ಬಳಸಿಕೊಳ್ಳಲಾಗುತ್ತಿದೆ. ಊಟಕ್ಕಾಗಿ 6 ಎಕರೆಯನ್ನು ಮೀಸಲಿಡಲಾಗುತ್ತಿದೆ. ಅರತಕ್ಷತೆಗೆ ಮುಂಬೈನಿಂದ ಬಂದಿರುವ ಬಾಲಿವುಡ್​​ ಕಲಾನಿರ್ದೇಶಕರು ಮತ್ತು ಕರ್ನಾಟಕದ ಖ್ಯಾತ ಕಲಾ ನಿರ್ದೇಶಕರು ಆರತಕ್ಷತೆ ಸೆಟ್ ಹಾಕುತ್ತಿರುವುದು ಮತ್ತೊಂದು ವಿಶೇಷ.

Last Updated : Mar 3, 2020, 11:52 AM IST

ABOUT THE AUTHOR

...view details