ಬಳ್ಳಾರಿ:ಪೊಲೀಸರ ಬಗ್ಗೆ ವಿಪರೀತ ಕಾಳಜಿ ಹೊಂದಿದ್ದ ಇಂದಿರಾ ಗಾಂಧಿ ಪೊಲೀಸರಿಂದಲೇ ಹತ್ಯೆಯಾಗಿದ್ದು ವಿಷಾದನೀಯ ಎಂದು ನಿವೃತ್ತ ಡೈರೆಕ್ಟರ್ ಜನರಲ್ ಆಫ್ ಪೊಲೀಸ್ ಡಾ.ಡಿ.ವಿ. ಗುರುಪ್ರಸಾದ್ ಹೇಳಿದರು.
ನಗರದ ಕೊಟ್ಟೂರು ಸ್ವಾಮಿ ಶಿಕ್ಷಣ ಕಾಲೇಜಿನಲ್ಲಿ 'ಗೂಢಚರ್ಯೆಯ ಆ ದಿನಗಳು' ಪುಸ್ತಕದ ಕುರಿತು ನಡೆದ ಸಂವಾದದಲ್ಲಿ ಅವರು ಮಾತನಾಡಿದರು.
ತುರ್ತುಪರಿಸ್ಥಿತಿ ನಂತರ ಅಧಿಕಾರ ಕಳೆದುಕೊಂಡಿದ್ದ ಇಂದಿರಾಗಾಂಧಿ ಅವರು ಹಂಪಿಯಲ್ಲಿ 3 ತಿಂಗಳ ಕಾಲ ತಂಗಿದ್ದ ಕಂಚಿಕಾಮಕೋಟಿ ಶ್ರೀಗಳನ್ನು ಭೇಟಿಯಾಗಲು ಆಗಮಿಸಿದ್ದರು. ಶ್ರೀಗಳ ಆಶೀರ್ವಾದ ಪಡೆದು ಹಸನ್ಮುಖಿಯಾಗಿ ಹೊರಬಂದ ಇಂದಿರಾ ಗಾಂಧಿ ಅವರು ವಿಧಾನಪರಿಷತ್ ಸದಸ್ಯ ನಾರಾಯಣ ಸ್ವಾಮಿ ಅವರ ಹೊಸಪೇಟೆಯಲ್ಲಿರುವ ಮನೆಗೆ ಊಟಕ್ಕೆ ತೆರಳಿದ್ದರು.
ಆಗ ಹೊಸಪೇಟೆಯ ಎಸಿಪಿಯಾಗಿದ್ದ ನಾನು ಮತ್ತು ನಮ್ಮ ಎಸ್ಪಿಯವರು ನಾರಾಯಣಸ್ವಾಮಿ ಅವರ ಮನೆ ಹೊರಗಡೆ ಕಾಯುತ್ತಿದ್ದೆವು. ಇದನ್ನು ಗಮನಿಸಿದ ಇಂದಿರಾಗಾಂಧಿ ಅವರು ನಾರಾಯಣಸ್ವಾಮಿ ಅವರನ್ನು ಕೇಳಿ ಆ ಪೊಲೀಸ್ ಅಧಿಕಾರಿಗಳಿಗೇ ಊಟಕ್ಕೆ ಕರೆಯುವುದಿಲ್ಲವೇ, ಅವರು ಬರದಿದ್ದರೇ ನನಗೂ ಊಟ ಬೇಡ ಎಂದು ಹೇಳಿದ್ದನ್ನು ನೆನಪಿಸಿಕೊಂಡರು.
ರಾಜ್ಯದ ಸುರಕ್ಷತೆ ಮತ್ತು ಭದ್ರತೆಯೇ ಗುಪ್ತಚರ ದಳದ ಪ್ರಮುಖ ಕೆಲಸ. ಕಾನೂನು ಸುವ್ಯವಸ್ಥೆ ಸರಿಯಾಗಿ ಇರದಿದ್ದರೆ, ಯಾವುದೇ ಸರ್ಕಾರವು ಇರದು. ಸಣ್ಣ ಸಮಸ್ಯೆ ಉದ್ಭವಿಸಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ಬರುತ್ತದೆ ಎಂಬ ಮಾಹಿತಿ ದೊರೆತರೂ ಮುನ್ನೆಚ್ಚರಿಕೆ ವಹಿಸುತ್ತೇವೆ ಎಂದರು.
10 ಸಾವಿರ ರೈತರು ಒಂದೆಡೆ ಸೇರಿ ವಿಧಾನಸಭೆಗೆ ಮುತ್ತಿಗೆ ಹಾಕುತ್ತಾರೆ ಎಂದಿಟ್ಟುಕೊಳ್ಳಿ, ಇದರ ಹಿಂದೆ ಯಾರಾದರೂ ಇದ್ದೇ ಇರುತ್ತಾರೆ. ಸ್ವಂತ ದುಡ್ಡಲ್ಲಿ ಅಷ್ಟೊಂದು ರೈತರು ಬರಲು ಸಾಧ್ಯವೇ ಇಲ್ಲವೆಂಬುದನ್ನು ಅರಿತು ಅದರ ಪೂರ್ವಾಪರ ಮಾಹಿತಿಯ ಮುನ್ನಚ್ಚೆರಿಕೆ ಕೊಡುವ ಕೆಲಸ ಗುಪ್ತಚರದಳದ್ದು ಎಂಬುದನ್ನು ಉದಾರಣೆಗಳ ಮೂಲಕ ಅವರು ವಿವರಿಸಿದರು.
ವೀರಶೈವ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಟಿ.ಕೊಟ್ರಪ್ಪ, ಕೊಟ್ಟೂರು ಸ್ವಾಮಿ ಶಿಕ್ಷಣ ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಅರವಿ ಬಸವನಗೌಡ, ಎಸ್ಪಿ ಲಕ್ಷ್ಮಣ ನಿಂಬರಗಿ, ಅರಿವು ಸಂಸ್ಥೆಯ ಎಸ್.ಪನ್ನರಾಜ, ಡಾ.ಅರವಿಂದ ಪಾಟೀಲ, ಕಾಲೇಜಿನ ಪ್ರಾಚಾರ್ಯಎಸ್.ಎ.ಹಿರೇಮಠ, ಪಿ.ಆರ್.ವೆಂಕಟೇಶ, ಯೋಗ ನಾಗರಾಜ, ಎಚ್.ಎಂ.ಕೊಟ್ರಯ್ಯ, ಎಲ್.ಟಿ.ಶೇಖರ, ಮಹೇಂದ್ರ ಕುಮಾರ ಇದ್ದರು.