ಬಳ್ಳಾರಿ:ಗಣಿನಾಡು ಬಳ್ಳಾರಿ ತಾಲೂಕಿನ ನಾನಾ ಗ್ರಾಮಗಳಲ್ಲಿನ ರೈತರು ಬೆಳೆಯುವ ಕರಿಬೇವು ಬೆಳೆಗೆ ಕಿಮ್ಮತ್ತೇ ಇಲ್ಲದಂತಾಗಿದೆ. ಬಳ್ಳಾರಿ ತಾಲೂಕಿನ ಬಿ.ಬೆಳಗಲ್ಲು, ಬೆಳಗಲ್ಲು ತಾಂಡಾ, ಹರಗಿನಡೋಣಿ, ಜಾನೆಕುಂಟೆ, ಜಾನೆಕುಂಟೆ ತಾಂಡಾ ಸೇರಿದಂತೆ ಇನ್ನಿತರೆ ಗ್ರಾಮಗಳಲ್ಲಿ ಬೆಳೆದ ಕರಿಬೇವು ಬೆಳೆಗಾರರು ಸದ್ಯ ಸಂಕಷ್ಟ ಎದುರಿಸುತ್ತಿದ್ದಾರೆ.
ಸದ್ಯ ಕರಿಬೇವು ಬೆಳೆ ಕೆಜಿಗೆ 3 ರೂಪಾಯಿಯಂತೆ ಮಾರಾಟವಾಗುತ್ತಿದ್ದು, ರೈತರು ನಷ್ಟ ಅನುಭವಿಸುವಂತಾಗಿದೆ. ಕಳೆದ ಬಾರಿ ಈ ಕರಿಬೇವಿಗೆ ಎಲ್ಲಿಲ್ಲದ ಬೇಡಿಕೆಯಿತ್ತು. ಒಂದು ಕೆಜಿ ಕರಿಬೇವು ಅಂದಾಜು 25ರಿಂದ 30 ರೂಪಾಯಿಗೆ ಮಾರಾಟವಾಗುತಿತ್ತು. ಈ ಬಾರಿ ಉತ್ತಮ ಫಸಲು ಬಂದರೂ ಕೂಡ ಕರಿಬೇವಿಗೆ ಕಿಮ್ಮತ್ತೇ ಇಲ್ಲದಂತಾಗಿದೆ.
ಪರಿಹಾರದ ನಿರೀಕ್ಷೆಯಲ್ಲಿ ಕರಿಬೇವು ಬೆಳೆದ ರೈತರು ಇದಲ್ಲದೆ ರೈತರಿಂದ ಕರಿಬೇವು ಖರೀದಿಸುವ ದಲ್ಲಾಳಿಗಳು ಕರಿಬೇವನ್ನು ಆಂಧ್ರ ಪ್ರದೇಶದ, ತಮಿಳುನಾಡು, ತೆಲಂಗಾಣ ಸೇರಿದಂತೆ ವಿದೇಶಕ್ಕೂ ಕೂಡ ರಫ್ತು ಮಾಡುತ್ತಿರುವುದು ಕೂಡ ಗಮನಾರ್ಹ. ಆದರೀಗ ಈ ಕರಿಬೇವಿಗೆ ಸೂಕ್ತ ಬೆಲೆಯಿಲ್ಲದೆ ಆಯಾ ಗ್ರಾಮಗಳಲ್ಲಿ ಬೆಳೆದ ರೈತರ ಹೊಲಗಳಿಂದ ಗ್ರಾಮಗಳ ಸರಹದ್ದು ಕೂಡ ದಾಟುತ್ತಿಲ್ಲ.
ಇದರಿಂದ ಕರಿಬೇವು ಬೆಳೆಗಾರರು ತೀವ್ರ ಆರ್ಥಿಕ ಸಂಕಷ್ಟ ಎದುರಿಸಬೇಕಾಗಿದೆ. ಅತ್ತ ತೋಟಗಾರಿಕೆ ವ್ಯಾಪ್ತಿಗೂ ಈ ಬೆಳೆ ಒಳಪಡುವುದಿಲ್ಲ. ಬೆಳೆ ನಷ್ಟ ಪರಿಹಾರಕ್ಕಾಗಿ ತೋಟಗಾರಿಕೆ ಇಲಾಖೆಯತ್ತ ಅಲೆದಾಡಿದರೂ ಕೂಡ ಸೂಕ್ತ ಪರಿಹಾರವಿಲ್ಲ. ಇದರಿಂದ ಕರಿಬೇವು ಬೆಳೆದ ರೈತರು ಮತ್ತಷ್ಟು ಸಂಕಷ್ಟಕ್ಕೀಡಾಗಿದ್ದಾರೆ.
ಈ ಸಂಬಂಧ ಈಟಿವಿ ಭಾರತದೊಂದಿಗೆ ಮಾತನಾಡಿದ ಕರಿಬೇವು ಬೆಳೆಗಾರ ಬಸವಣ್ಣೆಯ್ಯ, ಕರಿಬೇವಿಗೆ ಸೂಕ್ತ ಬೆಲೆ ಇಲ್ಲ. ಕಳೆದ ಬಾರಿ ನೆರೆಹೊರೆಯ ರಾಜ್ಯಗಳಿಗೆ ಈ ಕರಿಬೇವು ರಫ್ತಾಗಿತ್ತು. ಆದರೀಗ ಉತ್ತಮ ಫಸಲು ಬಂದರೂ ಕೂಡ ಮಾರುಕಟ್ಟೆಯಲ್ಲಿ ಸೂಕ್ತ ದರವಿಲ್ಲ. ಮನಸೋ ಇಚ್ಛೆಯಂತೆ ಕರಿಬೇವನ್ನು ಮಾರಾಟ ಮಾಡಲಾಗುತ್ತೆ ಎಂದರು.
ಮತ್ತೋರ್ವ ರೈತ ಬಿ.ಎಂ.ಸಿದ್ಧಲಿಂಗಯ್ಯ ಮಾತನಾಡಿ, ಎಕರೆಗೆ ಅಂದಾಜು 25 ಸಾವಿರ ರೂ. ವ್ಯಯಿಸಲಾಗಿದೆ. ಈ ರೀತಿ ಖರ್ಚು ಮಾಡಿರುವ ಹಣ ಸಹ ಕೈಸೇರುವ ಅನುಮಾನ ವ್ಯಕ್ತವಾಗಿದೆ. ಮಾರುಕಟ್ಟೆಯಲ್ಲಿ ಕೆಜಿಗೆ ಕೇವಲ 3 ರೂಪಾಯಿಯಂತೆ ಖರೀದಿಸಲಾಗುತ್ತೆ. ಕೂಡಲೇ ರಾಜ್ಯ ಸರ್ಕಾರ ಇತ್ತ ಗಮನಹರಿಸಿ ಸೂಕ್ತ ಪರಿಹಾರ ಕಲ್ಪಿಸಿಕೊಡಬೇಕೆಂದು ರೈತರು ಆಗ್ರಹಿಸಿದ್ದಾರೆ.