ಬಳ್ಳಾರಿ: ಯಾರೇ ಆಗಲಿ ಭ್ರಷ್ಟಾಚಾರದಲ್ಲಿ ಸಿಲುಕಿಕೊಂಡಿದ್ದರೆ ಅದನ್ನ ಈ ಸರ್ಕಾರ ಸಹಿಸೋದಿಲ್ಲ. ಹೀಗಾಗಿ, ಮಹಾನಗರ ಪಾಲಿಕೆ ಆಯುಕ್ತೆ ಎಂ.ವಿ.ತುಷಾರಮಣಿ ಅವರನ್ನ ಈಗಾಗಲೇ ಅಮಾನತು ಮಾಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ಎಸ್.ಆನಂದಸಿಂಗ್ ತಿಳಿಸಿದ್ದಾರೆ.
ನಗರದ ವಿಮ್ಸ್ ನಿರ್ದೇಶಕರ ಕಚೇರಿಯ ಸಭಾಂಗಣದಲ್ಲಿಂದು ಕರೆದಿದ್ದ ಕೋವಿಡ್ ಪ್ರಗತಿ ಪರಿಶೀಲನಾ ಸಭೆಯಲ್ಲಿ ಪಾಲ್ಗೊಂಡ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಯಾ ಇಲಾಖಾ ಮೇಲಾಧಿಕಾರಿಗಳು ಯಾರೇ ಆಗಲಿ ಭ್ರಷ್ಟಾಚಾರದಲ್ಲಿ ಸಿಲುಕಿಕೊಂಡಿರೋದು ತರವಲ್ಲ. ಅದನ್ನ ಈ ಸರ್ಕಾರ ಸಹಿಸೋದಿಲ್ಲ. ಹೀಗಾಗಿ, ಮಹಾನಗರ ಪಾಲಿಕೆ ಆಯುಕ್ತೆ ಎಂ.ವಿ.ತುಷಾರಮಣಿ ಅವರನ್ನ ಈಗಾಗಲೇ ಅಮಾನತು ಮಾಡಲಾಗಿದೆ ಎಂದರು.
ನಂತರ ಮಾತನಾಡಿದ ಅವರು, ಅವರು ಕೆಲ ವಿಚಾರಗಳನ್ನ ವಿಡಿಯೋ ಮತ್ತು ಆಡಿಯೊ ತುಣುಕಿನಲ್ಲಿ ಸ್ಪಷ್ಟಪಡಿಸಿದ್ದಾರೆ. ಮಿನಿಸ್ಟರ್ ಗೆ ಕೊಡ್ಬೇಕು ಎಂಬೋದರ ಬಗ್ಗೆಯೂ ಪ್ರಸ್ತಾಪಿಸಿದ್ದಾರೆ. ಅದ್ಯಾವ ಮಿನಿಸ್ಟರ್ ಗೆ ಕೊಡಬೇಕು ಅಂತ ವಿಚಾರಣೆಯಿಂದ ಬಹಿರಂಗವಾಗಲಿದೆ. ವಿಚಾರಣೆಯಲ್ಲಿ ಅವರು ಭ್ರಷ್ಟಾಚಾರದಲ್ಲಿ ತೊಡಗಿರೋದು ಸಾಬೀತಾದ್ರೆ, ಡಿಸ್ ಮಿಸ್ ಆಗಬಹುದು. ಅದರಲ್ಲೇನು ಅಚ್ಚರಿಯಿಲ್ಲ ಎಂದರು.
ನೆರೆಯ ಆಂಧ್ರಪ್ರದೇಶ ರೋಗಿಗಳಿಂದ ಬಳ್ಳಾರಿ ವಿಮ್ಸ್ ಆಸ್ಪತ್ರೆಗೆ ಹೊರೆ: ನೆರೆಯ ಆಂಧ್ರಪ್ರದೇಶದ ಗಡಿಭಾಗದ ನಾನಾ ಗ್ರಾಮಗಳಿಂದ ಬಳ್ಳಾರಿ ವಿಮ್ಸ್ ಆಸ್ಪತ್ರೆಗೆ ಬರುವ ರೋಗಿಗಳಿಂದ ಕರ್ನಾಟಕ ರಾಜ್ಯಕ್ಕೆ ಹೊರೆಯಾಗಿದೆ. ಆ ಕುರಿತು ಕೂಡ ಈ ದಿನ ನಡೆದ ಸಭೆಯಲ್ಲಿ ಚರ್ಚಿಸಲಾಯಿತು ಎಂದರು.
ಉನ್ನತ ವೈದ್ಯಕೀಯ ಶಿಕ್ಷಣ ಇಲಾಖೆಯ ಡೈರೆಕ್ಟರ್ ಡಾ.ಗಿರೀಶ ಅವರೂ ಕೂಡ ಸೂಕ್ತ ಸಲಹೆಗಳನ್ನ ನೀಡಿದ್ದಾರೆ. ಬಳ್ಳಾರಿಯ ಟ್ರಾಮಾಕೇರ್ ಹಾಗೂ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳಲ್ಲಿ ಅಗತ್ಯ ಸೌಲಭ್ಯ ಕಲ್ಪಿಸೋದರ ಬಗ್ಗೆಯೂ ಚರ್ಚಿಸಲಾಯಿತು. ಮುಂದಿನ ದಿನಗಳಲ್ಲಿ ಸೂಕ್ತ ಸೌಲಭ್ಯ ಕಲ್ಪಿಸಿಕೊಡಲು ನಿರ್ಧರಿಸಲಾಗುವುದು ಎಂದು ತಿಳಿಸಿದರು.