ಹೊಸಪೇಟೆ: ಕೇಂದ್ರ ಬಜೆಟ್ನಲ್ಲಿ ಕರ್ನಾಟಕಕ್ಕೆ ಎಲ್ಲಾ ರಂಗಕ್ಕೆ ಸೇರಿ 81 ಸಾವಿರ ಕೋಟಿ ರೂ. ಬಿಡುಗಡೆಯಾಗಿದೆ. ಅಲ್ಲದೆ, ಬರುವ ವರ್ಷ 1.16 ಲಕ್ಷ ಕೋಟಿ ರೂ. ಬರಲಿದೆ ಎಂದು ಹಜ್ ಮತ್ತು ವಕ್ಫ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆನಂದ್ ಸಿಂಗ್ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಸದರು ಜಾಸ್ತಿ ಇದ್ದರೆ ಒಂದು ಕಣ್ಣಿಗೆ ಬೆಣ್ಣೆ, ಮತ್ತೊಂದು ಕಣ್ಣಿಗೆ ಸುಣ್ಣ ಹಚ್ಚಲು ಬರುವುದಿಲ್ಲ. ಸಂಸದರು ಇದ್ದರೂ ಇಲ್ಲದಿದ್ದರೂ ಅನುದಾನ ನೀಡಬೇಕಾಗುತ್ತದೆ. ಸರ್ಕಾರ ತಾರತಮ್ಯ ಮಾಡುವುದಿಲ್ಲ ಎಂದರು.
ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಆನಂದ್ ಸಿಂಗ್ ಕೇಂದ್ರ ಸರ್ಕಾರ ಮಲತಾಯಿ ಧೋರಣೆ ಮಾಡುತ್ತಿಲ್ಲ. ಸರಿಸಮಾನವಾಗಿ ಅನುದಾನ ನೀಡಿದ್ದಾರೆ. ಟೀಕೆ, ಟಿಪ್ಪಣಿಗಳು ಬರುವುದು ಸಾಮಾನ್ಯ. ಚುನಾವಣೆ ಸಂದರ್ಭದಲ್ಲಿ ಆಯಾ ರಾಜ್ಯಗಳಿಗೆ ಅನುದಾನ ಬಿಡುಗಡೆ ಮಾಡುವುದು ಸಹಜ. ಸರಿ ಸಮಾನ ಹಂಚಿಕೆ ಮಾಡಲಾಗುತ್ತಿದೆ ಎಂದರು.
ಬೆಲೆ ಏರಿಕೆ ಪ್ರಶ್ನೆಗೆ ಉತ್ತರಿಸಿದ ಸಚಿವ ಆನಂದ್ ಸಿಂಗ್, ಕೇಂದ್ರ ಸರ್ಕಾರ ಕಣ್ಣು ಮುಚ್ಚಿ ಕುಳಿತುಕೊಂಡಿಲ್ಲ. ಬೆಲೆ ಏರಿಕೆ ಕುರಿತು ತಿಳಿದಿದೆ. ನರೇಂದ್ರ ಮೋದಿ ಅವರಿಗೆ ಮುಂದಾಲೋಚನೆ ಇದೆ. ಒಳ್ಳೆಯ ಕೆಲಸ ಮಾಡುವಾಗ ಸಮಸ್ಯೆಗಳು ಬರುತ್ತವೆ. ಬೆಲೆ ಏರಿಕೆ ಕುರಿತು ಅವರಿಗೆ ತಿಳಿದಿದೆ. ಮುಂದಿನ ದಿನಗಳಲ್ಲಿ ಕಾದು ನೋಡಬೇಕಾಗಿದೆ ಎಂದು ಸಮಜಾಯಿಸಿ ನೀಡಿದರು.