ಹೊಸಪೇಟೆ: ರಾಜ್ಯ ಸಚಿವ ಸಂಪುಟ ವಿಸ್ತರಣೆ ಹಿನ್ನೆಲೆ ಮುಖ್ಯಮಂತ್ರಿ ಯಡಿಯೂರಪ್ಪನವರು ಹಾಗೂ ನಾನು ದೆಹಲಿಗೆ ತೆರಳಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರನ್ನು ಭೇಟಿ ಮಾಡಿದ್ದೇವೆ. ಹೈಕಮಾಂಡ್ ಗ್ರೀನ್ ಸಿಗ್ನಲ್ ನೀಡಿದ ಬಳಿಕ ಸಿಎಂ ಸಚಿವ ಸಂಪುಟ ವಿಸ್ತರಣೆ ಮಾಡಲಿದ್ದಾರೆ ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದರು.
ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಆರ್.ಆರ್.ನಗರ ಹಾಗೂ ಶಿರಾ ಮತ್ತು ಎಂಎಲ್ಸಿ ಚುನಾವಣೆಯ ಗೆಲುವಿನ ಕುರಿತು ನಮ್ಮ ನಾಯಕರಿಗೆ ಮಾಹಿತಿ ನೀಡಿದ್ದೇವೆ.
ನಮ್ಮ ದೆಹಲಿ ಭೇಟಿ ಕುರಿತು ಹಾಗೂ ಸಚಿವ ಸಂಪುಟ ವಿಸ್ತರಣೆ ಬಗ್ಗೆ ಮಾತಿಗಿಳಿದಾಗ ಉಳಿದ ಹಿರಿಯ ನಾಯಕರ ಜತೆ ಚರ್ಚಿಸಿ ನಾಲ್ಕು ದಿನಗಳ ಬಳಿಕ ತಿಳಿಸುತ್ತೇವೆ ಎಂದು ಹೈಕಮಾಂಡ್ ಮಾತು ಕೊಟ್ಟಿರುವುದಾಗಿ ತಿಳಿಸಿದರು.
ಪ್ರವಾಹದಿಂದ ಹಾನಿಯಾದ ಸೇತುವೆ ಹಾಗೂ ರಸ್ತೆಗಳನ್ನು ಲೋಕೋಪಯೋಗಿ ಇಲಾಖೆ ವತಿಯಿಂದ ಶೀಘ್ರವೇ ದುರಸ್ಥಿಗೊಳಿಸಬೇಕೆಂದು ಪ್ರಗತಿ ಪರಿಶೀಲನಾ ಸಭೆಯಲ್ಲಿ ಹಾಜರಿದ್ದ ಅಧಿಕಾರಿಗಳಿಗೆ ಸೂಚಿಸಲಾಗಿದೆ.
ನಬಾರ್ಡ್ ಯೋಜನೆಯಡಿ ಕೈಗೊಂಡಿರುವ ಅಂಗನವಾಡಿ ಕಟ್ಟಡಗಳ ಕಾಮಗಾರಿ, 2020-21ರ ಪ್ರವಾಹ ಪರಿಹಾರ ಕಾಮಗಾರಿಗಳ ಪ್ರಗತಿ ವರದಿ ಸೇರಿದಂತೆ ಹಲವು ಇಲಾಖೆಯ ಕಾಮಗಾರಿಗಳ ಕುರಿತು ಸಹ ಮಾಹಿತಿ ಪಡೆದಿರುವೆ ಎಂದರು.
ಲೋಕೋಪಯೋಗಿ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ಸುದ್ದಿಗೋಷ್ಠಿಗೂ ಮುನ್ನ ಲೋಕೋಪಯೋಗಿ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ನಡೆಯಿತು. ಅರಣ್ಯ ಖಾತೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆನಂದ್ ಸಿಂಗ್, ವಿಧಾನ ಪರಿಷತ್ ಸದಸ್ಯರಾದ ಕೆ.ಸಿ.ಕೊಂಡಯ್ಯ, ಅಲ್ಲಂ ವೀರಭಧ್ರಪ್ಪ, ಜಿಲ್ಲಾಧಿಕಾರಿ ಎಸ್.ಎಸ್.ನಕುಲ್, ಎಸ್ಪಿ ಸೈದುಲು ಅಡಾವತ್, ಹೊಸಪೇಟೆ ಸಹಾಯಕ ಆಯುಕ್ತರಾದ ಶೇಖ್ ತನ್ವೀರ್ ಸೇರಿದಂತೆ ಇನ್ನಿತರರು ಸಭೆಯಲ್ಲಿದ್ದರು.