ಬಳ್ಳಾರಿ: ಗಣಿನಗರಿ ಬಳ್ಳಾರಿಯ ಸಿಎಸ್ಐ ತೆಲುಗು ಚರ್ಚ್ನ ಫಾದರ್ನಿಂದ ಸರ್ಕಾರಿ ಹಣವನ್ನ ಸ್ವಂತ ಖಾತೆಗೆ ಜಮಾವಣೆ ಮಾಡಿಕೊಳ್ಳುವ ಮುಖೇನ ಭಾರಿ ಭ್ರಷ್ಟಾಚಾರ ನಡೆಸಿರೋದು ಇದೀಗ ಬೆಳಕಿಗೆ ಬಂದಿದೆ.
ಈ ಹಿಂದೆ ಫಾದರ್ ರವಿಕುಮಾರ ಎಂಬಾತ ಯುವತಿಯೊಂದಿಗೆ ಪರಾರಿಯಾಗಿದ್ದಲ್ಲದೇ ಮಹಿಳೆಯಿಂದ ಪಡೆದ ಸುಮಾರು 9 ಲಕ್ಷ ರೂ.ಗಳ ಹಣವನ್ನ ವಾಪಸ್ ನೀಡದೆ ವಂಚನೆ ಪ್ರಕರಣದಲ್ಲಿ ಭಾಗಿಯಾಗಿ ಜೈಲು ಪಾಲಾಗಿದ್ದ. ಇದರ ಬೆನ್ನಲ್ಲೇ 2018ರಲ್ಲಿ ನಡೆದ ಈ ಪ್ರಕರಣವು ಈಗ ಮತ್ತೆ ಮುನ್ನಲೆಗೆ ಬಂದಿದೆ. ಸಿಎಸ್ಐ ತೆಲುಗು ಚರ್ಚ್ನ ಜೀರ್ಣೋದ್ಧಾರಕ್ಕಾಗಿ ಬಿಡುಗಡೆಗೊಳಿಸಿದ ಲಕ್ಷಾಂತರ ರೂ.ಗಳ ಸರ್ಕಾರಿ ಅನುದಾನವನ್ನ ಫಾದರ್ ರೆವರೆಂಡ್ ಇಮ್ಯಾನುಯೇಲ್ ಎಂಬುವವರು ತಮ್ಮ ಸ್ವಂತ ಖಾತೆಗೆ ಜಮಾಯಿಸಿಕೊಂಡು ವಂಚನೆ ಮಾಡಿದ್ದಾರೆಂಬ ಆರೋಪಗಳು ಕೇಳಿಬಂದಿವೆ.
ಇದನ್ನ ಪ್ರಶ್ನಿಸಿದ್ದ ಸಿಎಸ್ಐ ತೆಲುಗು ಚರ್ಚ್ ಟ್ರಸ್ಟ್ನ ಕಾರ್ಯದರ್ಶಿ ಹಾಗೂ ಖಜಾಂಚಿ ಅವರನ್ನೇ ಹೊರ ಹಾಕಲಾಗಿದ್ದು, ಅವರನ್ನ ಹುದ್ದೆಯಿಂದ ಹೊರಹಾಕಲಾಗಿದೆ. ಹೀಗಾಗಿ, ತೆಲುಗು ಚರ್ಚ್ನ ಅನುದಾನ ಗುಳುಂ ಎನಿಸಿದ ಫಾದರ್ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ತೆಲುಗು ಚರ್ಚ್ನ ಅನುಯಾಯಿಗಳು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಲ್ಲದೇ, ಈ ಕುರಿತು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿ ದ್ದಾರೆ.
ಬಳ್ಳಾರಿಯ ಕೋಟೆ ಪ್ರದೇಶದಲ್ಲಿರುವ ಸಿಎಸ್ಐ ತೆಲುಗು ಚರ್ಚ್ನ ಫಾದರ್ ಆಗಿರುವ ರೆವರೆಂಡ್ ಇಮ್ಯಾನುಯೇಲ್ ಎಂಬುವವರು 2018ರಲ್ಲಿ ರಾಜ್ಯ ಸರ್ಕಾರದಿಂದ ಮಂಜೂರಾದ ಲಕ್ಷಾಂತರ ರೂ.ಗಳ ಹಣವನ್ನ ಗುಳುಂ ಎನಿಸಿರುವ ಆರೋಪವನ್ನ ಹೊತ್ತಿದ್ದಾರೆ. ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಜಿಲ್ಲಾಡಳಿತದ ಮೊರೆ ಹೋದರೂ ಈವರೆಗೂ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ. ಈ ಹಿನ್ನೆಲೆಯಲ್ಲಿ ಚರ್ಚ್ನ ಎದುರು ಹತ್ತಾರು ಮಂದಿ ಅನುಯಾಯಿಗಳು ಶಾಂತಿಯುತ ಪ್ರತಿಭಟನೆಗೆ ಮುಂದಾಗಿದ್ದಾರೆ. ಆದರೆ, ಈ ಕುರಿತು ಯಾವುದೇ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿಲ್ಲ. ಅಂದಿನಿಂದ ಇಂದಿನವರಿಗೂ ಕೂಡ ಕೇವಲ ಜಿಲ್ಲಾಡಳಿತಕ್ಕೆ ಮನವಿ ಪತ್ರ ಸಲ್ಲಿಸಲಾಗಿದೆಯೇ ಹೊರತು ಪ್ರಕರಣ ದಾಖಲಾಗಿರೋದೇ ಅತೀವ ಚರ್ಚೆಗೆ ಗ್ರಾಸವಾಗಿದೆ.
ಪ್ರತಿಭಟನಾಕಾರರ ಆರೋಪ ಏನು?: ಈ ಚರ್ಚ್ನ ಹಣ ಗುಳುಂ ಎನಿಸಿರುವ ಫಾದರ್ನ ಹಿಂದೆ ಪ್ರಮುಖ ರಾಜಕೀಯ ಮುಖಂಡರ ಕೈವಾಡವೂ ಇದೆ. ಇಲ್ಲವಾದಲ್ಲಿ, ಆ ಫಾದರ್ ಒಬ್ಬರೇ ಲಕ್ಷಾಂತರ ರೂ. ಮೊತ್ತದ ಸರ್ಕಾರಿ ಹಣವನ್ನ ಸ್ವಾಹ ಮಾಡಲು ಸಾಧ್ಯವೇ ಇಲ್ಲ. ಚರ್ಚ್ನ ಜೀರ್ಣೋದ್ಧಾರಕ್ಕಾಗಿ ಬಳಕೆ ಮಾಡಬೇಕಾದ ಈ ಅನುದಾನವು ಫಾದರ್ ಪಾಲಾಗಿರೋದನ್ನ ನಾವು ಸಹಿಸೋಲ್ಲ. ಕೂಡಲೇ ಜಿಲ್ಲಾಡಳಿತ ಸೂಕ್ತ ತನಿಖೆಗೆ ಆದೇಶಿಸಬೇಕು. ಹಣ ವಂಚನೆ ಎನಿಸಿದ ಆರೋಪ ಹೊತ್ತಿರೋ ಫಾದರ್ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗ ಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.