ಹೊಸಪೇಟೆ:ಎಗ್ಗಿಲ್ಲದೆ ನಡೆಯುತ್ತಿರುವ ಮರಳು ದಂಧೆ ಮೇಲೆ ತಹಶೀಲ್ದಾರ್ ನೇತೃತ್ವದ ತಂಡ ದಾಳಿ ನಡೆಸಿ, 1 ಲಕ್ಷ ರೂ. ಮೌಲ್ಯದ ಮರಳನ್ನು ವಶಕ್ಕೆ ಪಡೆದುಕೊಂಡಿದೆ.
ಮರಳು ದಂಧೆ ಮೇಲೆ ತಹಶೀಲ್ದಾರ್ ದಾಳಿ: ಲಕ್ಷ ರೂ. ಮೌಲ್ಯದ ಮರಳು ವಶ - illegal sand mining in bellary
ಎಗ್ಗಿಲ್ಲದೆ ನಡೆಯುತ್ತಿರುವ ಮರಳು ದಂಧೆ ಮೇಲೆ ತಹಶೀಲ್ದಾರ್ ಅವರ ತಂಡ ದಾಳಿ ನಡೆಸಿ 1 ಲಕ್ಷ ರೂ. ಮೌಲ್ಯದ ಮರಳನ್ನು ವಶಕ್ಕೆ ಪಡೆದುಕೊಂಡಿದೆ ಎಂದು ಪ್ರಭಾರಿ ಕಂದಾಯ ಅಧಿಕಾರಿ ಮಲ್ಲಿಕಾರ್ಜುನ ಗೌಡ ತಿಳಿಸಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿದ ಪ್ರಭಾರಿ ಕಂದಾಯ ಅಧಿಕಾರಿ ಮಲ್ಲಿಕಾರ್ಜುನ ಗೌಡ, ಕರುನಾಡ ವೀರ ಕನ್ನಡಗರ ಸೇನೆ ದೂರಿನನ್ವಯ ನಗರದ ಜಂಬುನಾಥನ ಹಳ್ಳಿಯಲ್ಲಿ ಸದಾಶಿವ ಮತ್ತು ರಂಗನಾಥ ಎಂಬ ಇಬ್ಬರು ಕೆಲದಿನಗಳಿಂದ ನಿರಂತರ ಮರಳು ದಂಧೆ ನಡೆಸುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ತಹಶೀಲ್ದಾರ್ ನೇತೃತ್ವದ ತಂಡವು ದಾಳಿ ನಡೆಸಿದೆ. ದಾಳಿ ವೇಳೆ 1ಲಕ್ಷ ರೂ. ಮೌಲ್ಯದ ಮರಳು, 1 ಟ್ರ್ಯಾಕ್ಟರ್ ಹಾಗೂ 1 ಜೆಸಿಬಿ ಯಂತ್ರ ಮತ್ತು ಸದಾಶಿವ ಮತ್ತು ರಂಗನಾಥ ಎಂಬ ಇಬ್ಬರು ಚಾಲಕರನ್ನು ವಶಕ್ಕೆ ಪಡೆಯಲಾಗಿದೆ.
ಸದಾಶಿವ ಮತ್ತು ರಂಗನಾಥ ಎಂಬುವರು ದೂರದ ಹಳ್ಳಕೊಳ್ಳದಿಂದ ಮತ್ತು ನದಿಯ ದಡದಲ್ಲಿರುವ ಮರಳನ್ನು ಶೇಖರಣೆ ಮಾಡುತ್ತಿದ್ದರು. ಹಾಗೆಯೇ ಈ ದಂದೆಯನ್ನು ಸುಮಾರು ದಿನಗಳಿಂದ ನಡೆಸಿಕೊಂಡು ಬಂದಿದ್ದರು. ಜನರಿಗೆ ಇವರು 1 ಟ್ರ್ಯಾಕ್ಟರ್ ಮರಳನ್ನು 5,500 ರೂಪಾಯಿಯಿಂದ 6,000 ರೂಪಾಯಿಗೆ ಮಾರಾಟ ಮಾಡುತ್ತಿದ್ದರು ಎನ್ನಲಾಗಿದೆ. ಈಗಾಗಲೇ ಆರೋಪಿಗಳ ವಿರುದ್ಧ ದೂರು ದಾಖಲಾಗಿದೆ ಎಂದು ಹೇಳಿದರು.