ಬಳ್ಳಾರಿ:ಅಸೋಸಿಯೇಟೆಡ್ ಮೈನಿಂಗ್ (ಎಎಂಸಿ) ಕಂಪನಿ ಮಾಲೀಕರಾದ ಗಾಲಿ ಜನಾರ್ದನ ರೆಡ್ಡಿ ಹಾಗೂ ಅವರ ಪತ್ನಿ ಲಕ್ಷ್ಮಿ ಅರುಣಾ ವಿರುದ್ಧ ಪ್ರಕರಣ ದಾಖಲಿಸುವಂತೆ ಸುಪ್ರೀಂಕೋರ್ಟ್ ನೀಡಿರುವ ಅದೇಶವನ್ನು ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್.ಆರ್. ಹಿರೇಮಠ ಸ್ವಾಗತಿಸಿದ್ದಾರೆ.
ಜಿಲ್ಲೆಯ ಹೊಸಪೇಟೆ ನಗರದ ಬುದ್ಧ ಸಭಾಂಗಣದಲ್ಲಿಂದು ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಈ ಮುಂಚೆ ಜನಾರ್ದನ ರೆಡ್ಡಿ ಹಾಗೂ ಲಕ್ಷ್ಮಿ ಅರುಣಾ ಅವರನ್ನು ನ್ಯಾಯಾಲಯ ಖುಲಾಸೆ ಮಾಡಿತ್ತು. ಇದರ ವಿರುದ್ಧ ಸುಪ್ರೀಂಕೋರ್ಟ್ಗೆ ಮೇಲ್ಮನವಿ ಸಲ್ಲಿಸಲಾಗಿತ್ತು. ಇದನ್ನು ಪುರಸ್ಕರಿಸಿದ ನ್ಯಾಯಮೂರ್ತಿಗಳಾದ ಅರವಿಂದ ಕುಮಾರ ಅವರು ಪ್ರಕರಣ ದಾಖಲಿಸಿಕೊಳ್ಳಲು ಸೂಚಿಸಿದ್ದಾರೆ. ಹೀಗಾಗಿ ಗಾಲಿ ಜನಾರ್ದನ ರೆಡ್ಡಿ, ಲಕ್ಷ್ಮಿ ಅರುಣಾ ಅವರಿಗೆ ಸಿಬಿಐ ನೋಟಿಸ್ ಜಾರಿಮಾಡಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್.ಆರ್.ಹಿರೇಮಠ ಮೈನಿಂಗ್ ಮಾಫಿಯಾದಿಂದ ಬಂದ ಹಣ ಬಲದಿಂದ ನ್ಯಾಯಾಲಯದ ದಾರಿಯನ್ನೇ ತಪ್ಪಿಸಲು ಗಾಲಿ ಜನಾರ್ದನ ರೆಡ್ಡಿ ಹೊರಟಿದ್ದಾರೆ. ಅದು ಎಂದಿಗೂ ಸಾಧ್ಯವಿಲ್ಲ. ಅನ್ಯಾಯದ ವಿರುದ್ಧ ಸಮಾಜ ಪರಿವರ್ತನಾ ಸಮುದಾಯ ನಿರಂತರ ಹೋರಾಟ ಮಾಡಲಿದೆ ಎಂದು ಹಿರೇಮಠ ಹೇಳಿದರು.
ಸಿಟಿಜನ್ಸ್ ಫಾರ್ ಡೆಮಾಕ್ರಸಿ ಹಾಗೂ ಜನಾಂದೋಲನ ಮಹಾಮೈತ್ರಿ ಜಂಟಿಯಾಗಿ, ಮೋದಿ ಸರ್ಕಾರ ಪ್ರಜಾಸತ್ತಾತ್ಮಕ ಸಂಸ್ಥೆಗಳ ಮೇಲೆ ಹಾಗೂ ಸಂವಿಧಾನದ ಮೇಲೆ ದಾಳಿ ಮಾಡಿರುವ ವಿಸ್ತೃತ ವರದಿಯನ್ನು ರಾಷ್ಟ್ರಪತಿ ಅವರಿಗೆ ಸಲ್ಲಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತಾ ಶಾ ವಿರುದ್ಧವೂ ಹೋರಾಟ ಮಾಡಲಾಗುವುದು. ಅಲ್ಲದೇ, ಜನಾರ್ದನ ರೆಡ್ಡಿ ಅನೈತಿಕವಾಗಿ ಸಂಪಾದಿಸಿದ 40 ಸಾವಿರ ಕೋಟಿ ರೂ. ಹಣದ ವಿರುದ್ಧ ಮೋದಿ ಅವರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಎಸ್ ಆರ್ ಹಿರೇಮಠ ಆಕ್ರೋಶ ವ್ಯಕ್ತಪಡಿಸಿದರು.
5 ವರ್ಷದ ಅವಧಿಗೆ ಪ್ರಧಾನಿ ಮೋದಿ ಸರ್ಕಾರ ರೈತರಿಗೆ, ಕಾರ್ಮಿಕರಿಗೆ, ಮಹಿಳೆಯರಿಗೆ ಘೋರ ಅನ್ಯಾಯ ಮಾಡಿದೆ. ಸಂವಿಧಾನ ವಿರುದ್ಧ ನಡೆದುಕೊಳ್ಳುತ್ತಿದೆ. ಈ ಕುರಿತು ಈಗಾಗಲೇ ಹೋರಾಟದ ರೂಪುರೇಷಗಳನ್ನು ಮಾಡಿಕೊಳ್ಳಲಾಗಿದೆ ಎಂದು ಇದೇ ವೇಳೆ ತಿಳಿಸಿದರು.
ಇದಕ್ಕೂ ಮುನ್ನ ಬಹಿರಂಗ ಸಭೆಯಲ್ಲಿ ಮಾತನಾಡಿದ ಹಿರೇಮಠ, ಎಸ್‍ಯುಸಿಐ ಅಭ್ಯರ್ಥಿ ಎ.ದೇವದಾಸ್ ಅವರು ಪ್ರಾಮಾಣಿಕ ವ್ಯಕ್ತಿಯಾಗಿದ್ದಾರೆ. 30 ವರ್ಷಗಳಿಂದ ಹೋರಾಟ ಮಾಡುತ್ತಾ ಬಂದಿದ್ದಾರೆ. ಅಭಿವೃದ್ಧಿಯಾಗಬೇಕಾದರೆ ಎ.ದೇವದಾಸ್ ಅವರನ್ನು ಗೆಲ್ಲಿಸಿ ಎಂದು ಕರೆಕೊಟ್ಟರು. ಮುಖಂಡರಾದ ರಾಧಾಕೃಷ್ಣ ಉಪಾಧ್ಯ, ಕೆ.ಸೋಮಶೇಖರ, ಡಿ.ನಾಗಲಕ್ಷ್ಮಿ, ಟಿ.ಎಂ. ಶಿವಕುಮಾರ, ಮಂಜುಳಾ ಈ ವೇಳೆ ಉಪಸ್ಥಿತರಿದ್ದರು.