ಶಿಕ್ಷಕನನ್ನು ಬಿಗಿದಪ್ಪಿ ಬಿಕ್ಕಿ ಬಿಕ್ಕಿ ಅತ್ತ ಮಕ್ಕಳು ವಿಜಯನಗರ: ನೆಚ್ಚಿನ ಶಿಕ್ಷಕರೊಬ್ಬರು ವರ್ಗಾವಣೆ ಹಿನ್ನೆಲೆಯಲ್ಲಿ ಬೇಸರಗೊಂಡ ಶಾಲೆಯ ವಿದ್ಯಾರ್ಥಿಗಳು ಬಿಕ್ಕಿ ಬಿಕ್ಕಿ ಅತ್ತು ಶಿಕ್ಷಕರನ್ನು ಬಿಗಿದಪ್ಪಿಕೊಂಡು ಬೇರೆಡೆಗೆ ಹೋಗದಂತೆ ಬೇಡಿಕೊಂಡಿದ್ದಾರೆ.
ಹೊಸಪೇಟೆ ತಾಲೂಕಿನ ನಾಗೇನಹಳ್ಳಿಯ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಕಳೆದ 10 ವರ್ಷಗಳಿಂದ ಬಡ್ತಿ ಮುಖ್ಯಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಬಸಪ್ಪ ಗಡ್ಡದ ಅವರು ವರ್ಗಾವಣೆಗೊಂಡಿದ್ದರಿಂದ ಬೀಳ್ಕೊಡುಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ, ನೆಚ್ಚಿನ ಶಿಕ್ಷಕರು ಶಾಲೆ ಬಿಟ್ಟು ತೆರಳುವ ವಿಷಯ ಗೊತ್ತಾಗುತ್ತಿದ್ದಂತೆ ಮಕ್ಕಳೆಲ್ಲರೂ ಶಿಕ್ಷಕರನ್ನು ಸುತ್ತುವರಿದು ಅತ್ತು ಇಲ್ಲೇ ಇರಿ ಸರ್, ನಮ್ಮನ್ನು ಬಿಟ್ಟು ಬೇರೆ ಶಾಲೆಗೆ ಹೋಗಬೇಡಿ ಎಂದು ಕೈ ಮುಗಿದು ಅಲವತ್ತುಕೊಂಡಿದ್ದಾರೆ.
ಶಾಲೆ ಶಿಕ್ಷಕರು ಮಕ್ಕಳನ್ನು ಸಮಾಧಾನಪಡಿಸಿದರೂ ಸುಮ್ಮನಿರದೇ ವರ್ಗಾವಣೆಗೊಂಡ ಶಿಕ್ಷಕರನ್ನು ಬಿಗಿದಪ್ಪಿ ಕಣ್ಣೀರಾದರು. ಕೆಲ ಮಕ್ಕಳು ಶಿಕ್ಷಕರ ಕಾಲಿಗೆ ಬಿದ್ದು ಹೋಗದಂತೆ ಕೈ ಮುಗಿದರು. ಬಡ್ತಿ ಮುಖ್ಯಶಿಕ್ಷಕ ಬಸಪ್ಪ ಗಡ್ಡದ ಅವರು ಮಾತನಾಡಿ, ಮಕ್ಕಳನ್ನು ನೋಡಿದರೆ ಶಾಲೆ ಬಿಟ್ಟು ಹೋಗುವ ಮನಸಾಗುತ್ತಿಲ್ಲ. ಅವರ ಪ್ರೀತಿಗೆ ಮಾತೇ ಬರುತ್ತಿಲ್ಲ ಎಂದು ಕಣ್ಣೀರಾದರು.
ಬಡ್ತಿ ಮುಖ್ಯಗುರುಗಳಾದ ಬಸಪ್ಪ ಗಡದ ಅವರು ಕಳೆದ ಹತ್ತು ವರ್ಷಗಳಿಂದ ಶಾಲೆಯ ಅಭಿವೃದ್ಧಿಗೆ ಸಾಕಷ್ಟು ಶ್ರಮಿಸಿದ್ದಾರೆ. ಸೂಕ್ಷ್ಮ ಸ್ವಭಾವದವರಾದ ಅವರು ಮಕ್ಕಳೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದರು. ಮಕ್ಕಳೊಂದಿಗಿನ ಅವರ ನಂಟು ಕಣ್ಣೀರು ಸುರಿಸುವಂತೆ ಮಾಡಿದೆ ಎಂದು ಶಾಲೆಯ ಶಿಕ್ಷಕ ವಿಜಯ ಕುಮಾರ ಅಭಿಪ್ರಾಯ ಹಂಚಿಕೊಂಡರು.
ಗದಗ್ನಲ್ಲೂ ಮಕ್ಕಳು ಹೀಗೆ ಮಾಡಿದ್ದರು: ಪಾಠ ಮಾಡಿದ ಪ್ರೀತಿಯ ಶಿಕ್ಷಕರೊಬ್ಬರು ವರ್ಗಾವಣೆಯಾಗಿದ್ದು, ಶಿಕ್ಷಕ ಶಾಲೆ ಬಿಟ್ಟು ಹೊರಡೋ ವೇಳೆ ಭಾವುಕರಾದ ವಿದ್ಯಾರ್ಥಿನಿಯರು ಶಿಕ್ಷಕನನ್ನು ತಬ್ಬಿಕೊಂಡು ಬಿಕ್ಕಿಬಿಕ್ಕಿ ಅತ್ತ ಘಟನೆ ಜೂನ್ 23 ರಂದು ಗದಗದ ಖಾನತೋಟ ಓಣಿಯಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಹೆಣ್ಣು ಮಕ್ಕಳ ಶಾಲೆ ನಂ. 2 ರಲ್ಲಿ ನಡೆತ್ತು. ದೈಹಿಕ ಶಿಕ್ಷಣ ಶಿಕ್ಷಕ ಎಸ್. ಬಿ. ಪೂಜಾರ ಕಳೆದ ಒಂದೂವರೆ ವರ್ಷದಿಂದ ಇದೇ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಆದರೆ ಇಂದು ಅವರನ್ನು ವೆಂಕಟಾಪುರ ಗ್ರಾಮದ ಸರಕಾರಿ ಶಾಲೆಗೆ ವರ್ಗಾವಣೆಗೊಳಿಸಿ ಬಿಇಒ ಆದೇಶ ಹೊರಡಿಸಿದ್ದರ ಪರಿಣಾಮ, ಈಗ ಕೆಲಸ ಮಾಡುತ್ತಿದ್ದ ಶಾಲೆಯಿಂದ ಬಿಡುಗಡೆಗೊಂಡಿದ್ದರು. ಈ ಸಂಬಂಧ ನಡೆದ ಬೀಳ್ಕೊಡುಗೆ ಸಮಾರಂಭದಲ್ಲಿ ಶಿಕ್ಷಕನನ್ನು ತಬ್ಬಿಕೊಂಡು ವಿದ್ಯಾರ್ಥಿನಿಯರು ಬಿಕ್ಕಿ ಬಿಕ್ಕಿ ಅತ್ತಿದ್ದರು.
ಎಸ್. ಬಿ. ಪೂಜಾರ ಅವರಿಗೆ ಶಿಕ್ಷಕರ ವೃಂದದಿಂದ ಸನ್ಮಾನ ಹಾಗೂ ಬೀಳ್ಕೊಡುಗೆ ಸಮಾರಂಭ ಆಯೋಜಿಸಿದ್ದರು. ಮಕ್ಕಳೆಲ್ಲ ಶಿಕ್ಷಕನನ್ನು ಸುತ್ತುವರೆದು ಕಣ್ಣೀರಾಗಿದ್ದರು. ಮಕ್ಕಳನ್ನು ಸಮಾಧಾನಪಡಿಸಿ ಮತ್ತೆ ಇದೇ ಶಾಲೆಗೆ ಬರ್ತೀನಿ ಎಂದು ಸಮಾಧಾನಪಡಿಸಿ, ಶಿಕ್ಷಕ ಎಸ್.ಬಿ. ಪೂಜಾರ ಅಲ್ಲಿಂದ ತೆರಳಿದ್ದರು.
ಇದನ್ನೂ ಓದಿ:Teachers transfer: ವರ್ಗಾವಣೆಗೊಂಡ ಮೆಚ್ಚಿನ ಗುರುಗಳ ತಬ್ಬಿಕೊಂಡು ವಿದ್ಯಾರ್ಥಿನಿಯರ ಕಣ್ಣೀರು