ಕರ್ನಾಟಕ

karnataka

By

Published : Oct 14, 2020, 11:17 AM IST

ETV Bharat / state

ಹಂಪಿ ವಿವಿ ಫೆಲೋಶಿಪ್​​ಗೆ ಕತ್ತರಿ: ಕುಲಪತಿ ವಿರುದ್ಧ ವಿದ್ಯಾರ್ಥಿಗಳ ಆಕ್ರೋಶ

ಕನ್ನಡ ವಿವಿಯ ನಾಲ್ಕು ನಿಕಾಯಗಳ 13 ವಿಭಾಗಗಳಲ್ಲಿ 1,000ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಸಂಶೋಧನಾ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಅದರಲ್ಲಿ 100ಕ್ಕಿಂತ ಹೆಚ್ಚು ಎರಡು ವರ್ಷ ಕಳೆದವರಿಗೆ ಖಾಯಂ ನೋಂದಣಿಯನ್ನು‌ ನೀಡಿಲ್ಲ. ಅಲ್ಲದೇ ಫೆಲೋಶಿಪ್ ನೀಡಿಲ್ಲ ಎಂಬ ಆರೋಪ ವಿದ್ಯಾರ್ಥಿ ವಲಯದಿಂದ ಕೇಳಿ ಬರುತ್ತಿದೆ.

hampi-vv
ಹಂಪಿ ವಿವಿ ಕುಲಪತಿ

ಹೊಸಪೇಟೆ (ಬಳ್ಳಾರಿ): ಹಂಪಿ ಕನ್ನಡ ವಿಶ್ವವಿದ್ಯಾಲಯ ಸಂಶೋಧನಾ ವಿದ್ಯಾರ್ಥಿಗಳಿಗೆ ಖಾಯಂ ನೋಂದಣಿ ಹಾಗೂ ಫೆಲೋಶಿಪ್ ನೀಡದೇ ಸತಾಯಿಸುತ್ತಿದೆ ಎಂಬ ಆರೋಪ ಕೇಳಿಬಂದಿದೆ.‌‌ ಆದರೆ ಕುಲಪತಿ ಡಾ.ಸ.ಚಿ.ರಮೇಶ ಅವರು, ಶೇ.95ರಷ್ಟು ವಿದ್ಯಾರ್ಥಿಗಳಿಗೆ ಖಾಯಂ ನೋಂದಣಿ ನೀಡಲಾಗಿದೆ.‌ ಅಲ್ಲದೇ ವಿದ್ಯಾರ್ಥಿಗಳು ಫೆಲೋಶಿಪ್ ಬಾಕಿ ಉಳಿಸಿಕೊಂಡಿಲ್ಲ ಎನ್ನುತ್ತಿದ್ದಾರೆ.

ಕನ್ನಡ ವಿವಿಯ ನಾಲ್ಕು ನಿಕಾಯಗಳ 13 ವಿಭಾಗಗಳಲ್ಲಿ 1,000ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಸಂಶೋಧನಾ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಅದರಲ್ಲಿ 100ಕ್ಕಿಂತ ಹೆಚ್ಚು ಎರಡು ವರ್ಷ ಕಳೆದವರಿಗೆ ಖಾಯಂ ನೋಂದಣಿಯನ್ನು‌ ನೀಡಿಲ್ಲ. ಇದರಿಂದ ವಿದ್ಯಾರ್ಥಿಗಳು ಅಡಕತ್ತರಿಯಲ್ಲಿ ಸಿಲುಕಿಕೊಂಡಿದ್ದಾರೆ. ಅಲ್ಲದೇ ಫೆಲೋಶಿಪ್ ನೀಡಿಲ್ಲ ಎಂಬ ಆರೋಪ ವಿದ್ಯಾರ್ಥಿ ವಲಯದಿಂದ ಕೇಳಿ ಬರುತ್ತಿದೆ.

ಹಂಪಿ ವಿವಿ ಕುಲಪತಿ

ವಿದ್ಯಾರ್ಥಿಗಳ ಸಮಸ್ಯೆ ಏನು?:ಖಾಯಂ ನೋಂದಣಿಯನ್ನು ನೀಡದಿದ್ದರೇ ಆಡಳಿತಾತ್ಮಕವಾಗಿ ಫೆಲೋಶಿಪ್ ನೀಡಲು ಬರುವುದಿಲ್ಲ. ಖಾಯ ನೋಂದಣಿ ಆಗುವವರಿಗೂ ಯಾವುದೇ ಕಾರಣಕ್ಕೂ ವಿದ್ಯಾರ್ಥಿಗಳು ಫೆಲೋಶಿಪ್ ಕೇಳುವಂತಿಲ್ಲ.‌ ಅಲ್ಲದೇ ಸಂಶೋಧನಾ ಗೈಡ್​ಗಳ ಕುರಿತು ಖಚಿತತೆ ಇರುವುದಿಲ್ಲ. ಇದರಿಂದ ವಿದ್ಯಾರ್ಥಿಗಳು ಮಾನಸಿಕವಾಗಿ ಕುಸಿಯುವಂತಾಗಿದೆ.‌

ಖಾಯಂ ನೋಂದಣಿಗಾಗಿ ಬಾಂಡ್:ಖಾಯಂ ನೋಂದಣಿ ಆಗಲು ಕನ್ನಡ ವಿವಿಯ 20ರೂ. ಬಾಂಡ್​​​ ಅನ್ನು ಕಡ್ಡಾಯಗೊಳಿಸಿದೆ. ಈ ಬಾಂಡ್ ನೀಡಲು ಕೆಳ ವಿದ್ಯಾರ್ಥಿಗಳು ಹಿಂದೇಟು ಹಾಕುತ್ತಿದ್ದಾರೆ.‌ ಬಾಂಡ್​​ನಲ್ಲಿ 7- 8 ನಿಯಮಗಳನ್ನು ಹಾಕಲಾಗಿದೆ. ಅದರಲ್ಲಿನ 7ನೇ ನಿಯಮವು, ಸರ್ಕಾರದಿಂದ ನಿಯಮಾನುಸಾರ ನಿಗದಿಪಡಿಸಲಾದ ಪ್ರೋತ್ಸಾಹ ಧನ ಹಾಗೂ ಶಿಷ್ಯ ವೇತನವನ್ನು ಮಾತ್ರ ನಿರೀಕ್ಷಿಸಲಾಗುವುದು. ವಿಶ್ವವಿದ್ಯಾಲಯದಿಂದ ಇನ್ನಿತರ ಯಾವುದೇ ರೀತಿಯ ಪ್ರೋತ್ಸಾಹ ಧನ ಹಾಗೂ ಶಿಷ್ಯವೇತನವನ್ನು ನಿರೀಕ್ಷಿಸುವುದಿಲ್ಲ ಅಂಶವನ್ನು ಸೇರಿಸಲಾಗಿದೆ.‌

ಈ ಒಂದು ನಿಯಮ ವಿದ್ಯಾರ್ಥಿಗಳನ್ನು ಕಟ್ಟಿ ಹಾಕುವ ಪ್ರಯತ್ನ ಎನ್ನಲಾಗುತ್ತಿದೆ. ಒಂದು ವೇಳೆ ಹಕ್ಕು ಎಂದು ಪ್ರೋತ್ಸಾಹ ಧನ ಹಾಗೂ ಶಿಷ್ಯವೇತನ ಕೇಳಿದರೇ ಅದು ಕನ್ನಡ ವಿವಿ ನಿಯಮದ ಪ್ರಕಾರ ತಪ್ಪಾಗುತ್ತದೆ. ಆಗ ವಿದ್ಯಾರ್ಥಿಗಳು ಖಾಯಂ ನೋದಣಿಯಿಂದ ವಂಚಿತರಾಗಲಿದ್ದಾರೆ.

ವಿದ್ಯಾರ್ಥಿಗಳಿಗೆ ಫೆಲೋಶಿಪ್ ನೀಡಿಲ್ಲ

ಕನ್ನಡ ವಿವಿಯಲ್ಲಿ 200ಕ್ಕೂ ಹೆಚ್ಚು ಜನ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಫೆಲೋಶಿಪ್ ವಿದ್ಯಾರ್ಥಿಗಳು ಇದ್ದಾರೆ. ಸಂಶೋಧನಾ ವಿಭಾಗಕ್ಕೆ ಅನಕೂಲವಾಗಲೆಂದು ತಿಂಗಳಿಗೆ 10 ಸಾವಿರ ರೂ. ಫೆಲೋಶಿಪ್​​ ನೀಡಲಾಗುತ್ತದೆ. ಆದರೆ ಕಳೆದ ಮಾರ್ಚ್ ತಿಂಗಳಿನಿಂದ ವಿದ್ಯಾರ್ಥಿಗಳಿಗೆ ಫೆಲೋಶಿಪ್​​​ ನೀಡಿಲ್ಲ. ಮಾರ್ಚ್​​ನಿಂದ ಸೆಪ್ಟೆಂಬರ್ ವರೆಗಿನ ಫೆಲೋಶಿಪ್​​ ನೀಡಿಲ್ಲ. ಇದರಿಂದ ವಿದ್ಯಾರ್ಥಿಗಳು ಸಂಕಷ್ಟ ಅನುಭವಿಸುವಂತಾಗಿದೆ.

ಬಾಂಡ್ ನೀಡಲು ವಿದ್ಯಾರ್ಥಿಗಳಿಗೆ ಒತ್ತಡ ಹೇರಲಾಗುತ್ತಿದೆ. ಇದು ಸಂಕಷ್ಟಕ್ಕೀಡು ಮಾಡಿದೆ. ವಿದ್ಯಾರ್ಥಿ ಪ್ರೋತ್ಸಾಹ ಧನ ಮತ್ತು ಶಿಷ್ಯ ವೇತನವನ್ನು ಕೇಳಿದರೇ ತಪ್ಪಾಗುತ್ತದೆ.‌ ವಿದ್ಯಾರ್ಥಿ ಹಕ್ಕನ್ನು ಕಸಿಯಲಾಗುತ್ತಿದೆ. ಅಲ್ಲದೇ, ಮಾರ್ಚ್ ತಿಂಗಳಿಂದ ಫೆಲೋಶಿಪ್ ನೀಡಿಲ್ಲ.‌ ಕೊರೊನಾ ಕಾಲದಲ್ಲಿ ಸಂಕಷ್ಟ ಅನುಭವಿಸುವಂತಾಗಿದೆ ಎಂದು ಹೆಸರು ಹೇಳಲು ಇಚ್ಛಿಸದ ವಿದ್ಯಾರ್ಥಿಗಳು ತಮ್ಮ ಅಳಲು ತೋಡಿಕೊಂಡಿದ್ದಾರೆ.

ಆರೋಪ ಕುರಿತು ಕುಲಪತಿ ಡಾ.ಸ.ಚಿ.ರಮೇಶ್​ ಮಾತನಾಡಿ, ಸಂಶೋಧನಾ ವಿದ್ಯಾರ್ಥಿಗಳಿಗೆ ಶೇ.95ರಷ್ಟು ನೋಂದಣಿಯನ್ನು ನೀಡಲಾಗಿದೆ. ಈ ಎಲ್ಲ ವಿದ್ಯಾರ್ಥಿಗಳು ಯುಜಿಸಿ ನಿಯಮದ ಪ್ರಕಾರ ಮುಚ್ಚಳಿಕೆ ಪತ್ರವನ್ನು ಬರೆದು ನೀಡಬೇಕು. ಇನ್ನು ಶೇ.5ರಷ್ಟು ವಿದ್ಯಾರ್ಥಿಗಳು ಮಾತ್ರ ಮುಚ್ಚಳಿಕೆ ಪತ್ರವನ್ನು ನೀಡಬೇಕಾಗಿದೆ. ಕೊರೊನಾದಿಂದ ಊರಲ್ಲಿ ಇರುವುದರಿಂದ ಮುಚ್ಚಳಿಕೆ ಪತ್ರ ನೀಡಲು ತಡವಾಗಿದೆ. ಅಲ್ಲದೇ ಬಾಕಿ ಇರುವ ಫೆಲೋಶಿಪ್ ಅನ್ನು ವಿದ್ಯಾರ್ಥಿಗಳ ಖಾತೆಗೆ ಜಮೆ ಮಾಡಲಾಗಿದೆ.‌ ಫೆಲೋಶಿಪ್ ಅನ್ನು ಬಾಕಿ ಉಳಿಸಿಕೊಂಡಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ABOUT THE AUTHOR

...view details