ಬಳ್ಳಾರಿ :ಒಂದೆಡೆ ಬಳ್ಳಾರಿ ಮಹಾನಗರದ ಕೊಳಚೆ ಪ್ರದೇಶ ಹಾಗೂ ಸ್ಲಂಗಳಲ್ಲಿ ವಾಸಿಸುತ್ತಿರುವವರು ಬೀದಿ ದೀಪಗಳಿಲ್ಲದೇ ನರಕಯಾತನೆ ಅನುಭವಿಸಿದ್ರೆ. ಮತ್ತೊಂದೆಡೆ ದೊಡ್ಡ ದೊಡ್ಡ ಬಡಾವಣೆ ಹಾಗೂ ಕಾಲೋನಿಗಳಲ್ಲಿನ ಬೀದಿ ದೀಪಗಳಿಗೆ ಬಲ್ಬು ಇದ್ದರೆ ಮೇಲ್ಪದರು ಇಲ್ಲದಂತಾಗಿದೆ. ಈ ಸಂಬಂಧ ಈಟಿವಿ ಭಾರತ ನೈಜ ಸ್ಥಿತಿ ಪರಿಶೀಲಿಸದಾಗ ಬಹುತೇಕ ಕಡೆಗಳಲ್ಲಿ ಬೀದಿ ದೀಪಗಳದ್ದೇ ಕೊರತೆ ಎದ್ದು ಕಾಣುತ್ತಿದೆ.
ಬಳ್ಳಾರಿಯಲ್ಲಿ ಬೀದಿ ದೀಪಗಳ ಕೊರತೆ.. ಮಹಾನಗರ ಪಾಲಿಕೆ ವ್ಯಾಪ್ತಿಯೊಳಗೆ ಅಂದಾಜು 20 ಸಾವಿರಕ್ಕೂ ಅಧಿಕ ಬೀದಿ ದೀಪಗಳುಳ್ಳ ವಿದ್ಯುತ್ ಕಂಬಗಳು ಬರುತ್ತವೆ. ಬಳ್ಳಾರಿಯ ವಿಶಾಲನಗರ, ಶ್ರೀರಾಂಪುರ ಕಾಲೋನಿ, ರೂಪನಗುಡಿ ರಸ್ತೆ, ಗಂಗಪ್ಪ ಜೀನ್, ಮಿಲ್ಲರ್ ಪೇಟೆ, ರಾಘವೇಂದ್ರ ಕಾಲೋನಿ ಸೇರಿ ಇನ್ನಿತರೆಡೆ ಈ ಬೀದಿ ದೀಪಗಳ ಕೊರತೆಯಂತೂ ಹೇಳತೀರದಾಗಿದೆ.
ಮಹಾನಗರದ ಪ್ರಮುಖ ರಸ್ತೆ ಹಾಗೂ ವೃತ್ತಗಳಲ್ಲಿ ಮಾತ್ರ ಅಚ್ಚುಕಟ್ಟಾದ ವಿದ್ಯುತ್ ದೀಪಗಳ ವ್ಯವಸ್ಥೆ ಮಾಡಲಾಗಿದೆಯಾದ್ರೂ, ಉಳಿದೆಡೆ ವಿದ್ಯುತ್ ಕಂಬಗಳಿಗೆ ಸಕಾಲದಲ್ಲಿ ಬಲ್ಬು ಸೇರಿ ಪರಿಕರಗಳನ್ನು ಪೂರೈಸುವಲ್ಲಿ ಮಹಾನಗರ ಪಾಲಿಕೆಯಂತೂ ವಿಫಲವಾಗಿದೆ. ಈ ಸಂಬಂಧ ಈಟಿವಿ ಭಾರತದೊಂದಿಗೆ ಮಾತನಾಡಿದ ವಿಶಾಲನಗರದ ನಿವಾಸಿ ಶಿವಕುಮಾರ್ ಅವರು, ಮಹಾನಗರ ಪಾಲಿಕೆ ತನ್ನ ವ್ಯಾಪ್ತಿಯೊಳಗೆ ಬರುವ ವಿದ್ಯುತ್ ಕಂಬಗಳಲ್ಲಿನ ವಿದ್ಯುತ್ ದೀಪಗಳ ಅಳವಡಿಕೆ ಹಾಗೂ ಅದರ ನಿರ್ವಹಣೆಯಲ್ಲಿ ಸಂಪೂರ್ಣ ವಿಫಲಗೊಂಡಿದೆ ಎಂದರು.
ಈ ಸಂಬಂಧ ಈಟಿವಿ ಭಾರತ ಜತೆಗೆ ಪಾಲಿಕೆ ಸಹಾಯಕ ಎಂಜಿನಿಯರ್ ಬಸವರಾಜ್ ಅವರು ದೂರವಾಣಿ ಮೂಲಕ ಮಾತನಾಡಿದ್ದು, ನಮ್ಮಲ್ಲಿ ಯಾವುದೇ ವಿದ್ಯುತ್ ಕಂಬಗಳಲ್ಲಿ ವಿದ್ಯುತ್ ದೀಪಗಳ ಕೊರತೆಯೇ ಇಲ್ಲ. ಎಲ್ಲವೂ ಸರಿಯಾಗಿವೆ. ಈವರೆಗೂ ಯಾವುದೇ ದೂರು ಇಲ್ಲಿ ಸ್ವೀಕೃತಿಯಾಗಿಲ್ಲ. 20 ಸಾವಿರಕ್ಕೂ ಅಧಿಕ ವಿದ್ಯುತ್ ಕಂಬಗಳಿದ್ದು, ಎಲ್ಲಾ ಕಂಬಗಳಲ್ಲೂ ವಿದ್ಯುತ್ ದೀಪಗಳಿವೆ. ಯಾವುದಾದ್ರೂ ದೂರುಗಳಿದ್ದರೆ ಕೂಡಲೇ ಅಟೆಂಡ್ ಮಾಡುವೆ ಎಂದರು.
ಡಿಎಂಎಫ್ನಿಂದ ಹೊಸದಾಗಿ ಎಲ್ಇಡಿ ಬಲ್ಬು ಅಳವಡಿಕೆ ಮಾಡೋ ಕುರಿತು ಚಿಂತನೆ ನಡೆಯುತ್ತಿದೆ. ಇದು ಕೇವಲ ಹೊಸದಾಗಿ ಸ್ಥಾಪಿಸಲಾದ ವಿದ್ಯುತ್ ಕಂಬಗಳಿಗೆ ಮಾತ್ರ ಈ ಎಲ್‌ಇಡಿ ಬಲ್ಬು ಮಾಡಲಾಗುತ್ತೆ ಅಷ್ಟೇ ಎಂದರು. ಅಂದಾಜು 20 ಸಾವಿರಕ್ಕೂ ಅಧಿಕ ವಿದ್ಯುತ್ ಕಂಬಗಳಿಗೆ ಸಕಾಲದಲ್ಲಿ ವಿದ್ಯುತ್ ದೀಪಗಳ ಅಳವಡಿಕೆ ಕಾರ್ಯ ನಡೆಯುತ್ತಿಲ್ಲ. ಯಾರಾದ್ರೂ ಬಂದು ದೂರು ಸಲ್ಲಿಸಿದ್ರೆ ಸಾಕು. ಇರುಸು ಮುರುಸುಗೊಳ್ಳುವ ಈ ಪಾಲಿಕೆ ಅಧಿಕಾರಿಗಳು ಹೊಸ ವಿದ್ಯುತ್ ಕಂಬಗಳಿಗೆ ಅದ್ಹೇಗೆ ಎಲ್ಇಡಿ ಬಲ್ಬು ಅಳವಡಿಸಿ ನಿರ್ವಹಣೆ ಮಾಡುತ್ತಾರೋ ಎಂಬ ಯಕ್ಷ ಪ್ರಶ್ನೆ ಸಾರ್ವಜನಿಕರನ್ನ ಕಾಡುತ್ತಿದೆ.