ಬಳ್ಳಾರಿ:ಮಕ್ಕಳಲ್ಲಿ ದೇವರನ್ನು ಕಂಡು, ಮಹಿಳೆಯರನ್ನು ಗೌರವಿಸಬೇಕು. ಬಾಲ್ಯವಿವಾಹ-ದೇವದಾಸಿಯಂತಹ ಅನಿಷ್ಠ ಪದ್ದತಿಗಳನ್ನು ತೊಲಗಿಸಬೇಕು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯದರ್ಶಿ ಅರ್ಜುನ್.ಎಸ್.ಮಲ್ಲೂರ್ ತಿಳಿಸಿದ್ದಾರೆ.
ನಗರದ ಬಿಡಿಎಎ ಫುಟ್ಬಾಲ್ ಮೈದಾನದ ಸಭಾಂಗಣದಲ್ಲಿ ರೀಡ್ಸ್ ಸಂಸ್ಥೆ, ಕಾರ್ಡ್-ಜ್ಞಾನಜ್ಯೋತಿ ಕಾಲೇಜು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ಬಾಲ್ಯ ವಿವಾಹ, ದೇವದಾಸಿ ಪದ್ದತಿಗಳನ್ನು ತಡೆಗಟ್ಟುವಲ್ಲಿನ ಸವಾಲುಗಳು ಕುರಿತ ರಾಜ್ಯಮಟ್ಟದ ಸಾರ್ವಜನಿಕ ಸಂವಾದಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಬಾಲ್ಯವಿವಾಹ, ದೇವದಾಸಿ ಪದ್ದತಿಗಳು ರಾಷ್ಟ್ರಪಿತನ ಅಲೋಚನೆಗೆ ವಿರೋಧವಾದ ಅನಿಷ್ಠ ಪದ್ಧತಿಗಳು. ದೇಶಕ್ಕೆ ಸ್ವಾತಂತ್ರ್ಯ ಸಿಕ್ಕು 70 ವರ್ಷ ಕಳೆದರೂ ಇಂದಿಗೂ ಇಂತಹ ಪದ್ದತಿಗಳ ಜೀವಂತವಾಗಿರೋದು ವಿಷಾದನೀಯ. ಮಕ್ಕಳನ್ನು ಬಾಲ್ಯವಿವಾಹ ಎಂಬ ಅನಿಷ್ಟ ಪದ್ಧತಿಗೆ ದೂಡುವುದು ಎಷ್ಟು ಸರಿ. ಹಿರಿಯರು ಇದನ್ನು ಸಂಪ್ರದಾಯ ಎನ್ನುತ್ತಾರೆ. ಮಕ್ಕಳನ್ನು ವಿವಾಹದ ಸಂಕೋಲೆಗೆ ಒಳಪಡಿಸುವುದು ಯಾವ ಸಂಪ್ರದಾಯ. ಸರಿಯಾದ ವಯಸ್ಸಿಗೆ ಮದುವೆಯಾದರೆ ಮಾತ್ರ ಅವರು ಆರೋಗ್ಯದಿಂದಿರಲು ಸಾಧ್ಯ. ಅವರು, ಮಾನಸಿಕ ಮತ್ತು ದೈಹಿಕವಾಗಿ ಸಿದ್ಧರಾದ ನಂತರವೇ ಮದುವೆಯಾಗಬೇಕು ಎಂದರು.