ಬಳ್ಳಾರಿ:ಮಹಾಮಾರಿ ಕೊರೊನಾ ವೈರಸ್ ತಡೆಗೆ ದೇಶವ್ಯಾಪಿ ಲಾಕ್ಡೌನ್ ಮಾಡಿರುವ ಬೆನ್ನಲ್ಲೇ ಇತ್ತ ಕರ್ನಾಟಕ ಸರ್ಕಾರ 2000 ವೆಂಟಿಲೇಟರ್ ಖರೀದಿಗೆ ಚಿಂತನೆ ನಡೆಸಿದೆ ಎಂದು ಆರೋಗ್ಯ ಸಚಿವ ಬಿ. ಶ್ರೀರಾಮುಲು ತಿಳಿಸಿದ್ದಾರೆ.
ಕೋವಿಡ್-19 ವೈರಸ್ ಎಫೆಕ್ಟ್ ಮತ್ತಷ್ಟು ಹೆಚ್ಚಾಗುವ ಮುನ್ಸೂಚನೆಯಿಂದಲೇ ರಾಜ್ಯ ಸರ್ಕಾರ ಮತ್ತಷ್ಟು ವೆಂಟಿಲೇಟರ್ ಖರೀದಿಗೆ ಮುಂದಾಗಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಬಿ. ಶ್ರೀರಾಮುಲು ಅವರೇ ಈ ವೆಂಟಿಲೇಟರ್ ಖರೀದಿಯ ವಿಚಾರ ಕುರಿತು ಜಿಲ್ಲೆಯಲ್ಲಿಂದು ಮಾಧ್ಯಮದವರಿಗೆ ಮಾಹಿತಿ ನೀಡಿದ್ದಾರೆ.
ವೆಂಟಿಲೇಟರ್ ಖರೀದಿ ಬಗ್ಗೆ ಆರೋಗ್ಯ ಸಚಿವ ಬಿ.ಶ್ರೀರಾಮುಲು ಮಾಹಿತಿ ರಾಜ್ಯದ ಹಲವು ಸರ್ಕಾರಿ ಆಸ್ಪತ್ರೆಗಳಲ್ಲಿ ಈ ವೆಂಟಿಲೇಟರ್ಗಳ ಕೊರತೆ ಎದ್ದು ಕಾಣುತ್ತಿದ್ದು, ಕೊರೊನಾ ವೈರಸ್ ಸೋಂಕಿತರನ್ನು ವೆಂಟಿಲೇಟರ್ನಲ್ಲಿಡಬೇಕಾದ ಅನಿವಾರ್ಯತೆ ಇರುವುದರಿಂದ ಹೆಚ್ಚುವರಿಯಾಗಿ ವೆಂಟಿಲೇಟರ್ ಖರೀದಿಗೆ ಆರೋಗ್ಯ ಇಲಾಖೆ ಮುಂದಾಗಿದೆ ಎಂದರು.
ರಾಜ್ಯದ ಪ್ರತಿಯೊಂದು ಜಿಲ್ಲೆಗಳಲ್ಲೂ ಈ ಕೋವಿಡ್ - 19ರ ಪ್ರತ್ಯೇಕ ಆಸ್ಪತ್ರೆ ತೆರೆಯಲು ನಿರ್ಧರಿಸಿದ್ದು, ಬಳ್ಳಾರಿ ನಗರದ ಟಿಬಿ ಸ್ಯಾನಿಟೋರಿಯಂ ಪ್ರದೇಶ ವ್ಯಾಪ್ತಿಯಲ್ಲಿ ನಿರ್ಮಿಸುತ್ತಿರುವ ಟ್ರಾಮಾ ಕೇರ್ ಸೆಂಟರ್ನಲ್ಲಿ ಈ ಕೋವಿಡ್ - 19 ಹೆಸರಿನ ಆಸ್ಪತ್ರೆ ತೆರೆಯಲು ನಿರ್ಧರಿಸಲಾಗಿದೆ. ಬಳ್ಳಾರಿ ಗ್ರಾಮಾಂತರ ಶಾಸಕ ಬಿ.ನಾಗೇಂದ್ರ ಅವರ ಮನವಿ ಮೇರೆಗೆ ಈ ಕೋವಿಡ್ - 19 ಹೆಸರಿನ ಆಸ್ಪತ್ರೆ ತೆರೆಯಲಾಗುವುದು. ಈ ಕೂಡಲೇ ಟ್ರಾಮಾ ಕೇರ್ ಸೆಂಟರ್ಗೆ ಭೇಟಿ ನೀಡಿ ಪರಿಶೀಲನೆ ನಡೆಸುವುದಾಗಿ ಸಚಿವ ಶ್ರೀರಾಮುಲು ತಿಳಿಸಿದರು.