ಬಳ್ಳಾರಿ:ಕೋವಿಡ್-19 ಪರಿಸ್ಥಿತಿಯಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆಯನ್ನು ವಿದ್ಯಾರ್ಥಿಗಳ ಸುರಕ್ಷತೆಯ ದೃಷ್ಟಿಯಿಂದ ಯಶಸ್ವಿಯಾಗಿ ಪೂರ್ಣಗೊಳಿಸಲು ಸಾರ್ವಜನಿಕ ಶಿಕ್ಷಣ ಇಲಾಖೆಯ ವತಿಯಿಂದ ಪರೀಕ್ಷಾ ಕೇಂದ್ರಗಳಲ್ಲಿ ಅಗತ್ಯ ಸುರಕ್ಷಿತ ವ್ಯವಸ್ಥೆ ಕೈಗೊಳ್ಳಲಾಗಿದ್ದು, ಪೊಷಕರು ಪಾಲಿಸಬೇಕು ಎಂದು ಜಿಪಂ ಸಿಇಒ ಕೆ.ನಿತೀಶ್ ಹೇಳಿದರು.
ಪರೀಕ್ಷಾ ಕೇಂದ್ರಗಳಲ್ಲಿ ಆಶಾ ಕಾರ್ಯಕರ್ತೆಯರು ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿಯನ್ನು ಕರ್ತವ್ಯಕ್ಕೆ ಬಳಸಿಕೊಳ್ಳಬೇಕು. ಪ್ರತಿ ಪರೀಕ್ಷಾ ಕೇಂದ್ರಗಳ ಕೊಠಡಿಗಳಲ್ಲಿ ಪರೀಕ್ಷೆಯ ಮುಂಚಿತವಾಗಿ ಹಾಗೂ ಪರೀಕ್ಷೆ ಮುಗಿದ ನಂತರ ಸ್ಯಾನಿಟೈಸ್ ಮಾಡಬೇಕು. ಮಕ್ಕಳಿಗೆ ಯಾವುದೇ ರೀತಿಯ ಒತ್ತಡ ಹೇರಬಾರದು ಹಾಗೂ ಯಾವುದೇ ಕಾರಣಕ್ಕೂ ಕೇಂದ್ರಗಳಲ್ಲಿ ನಕಲು ಮಾಡಲು ಅವಕಾಶ ನೀಡಬಾರದು ಎಂದರು.
ನಗರದ ಡಾ.ರಾಜಕುಮಾರ್ ರಸ್ತೆಯಲ್ಲಿರುವ ಬಿ.ಡಿ.ಎ.ಎ ಫುಟ್‌ಬಾಲ್ ಮೈದಾನದ ಸಭಾಂಗಣದಲ್ಲಿ ಗುರುವಾರ ಎಸ್ಎಸ್ಎಲ್ಸಿ ಪೂರ್ವಭಾವಿ ಸಿದ್ಧತಾ ಸಭೆಯಲ್ಲಿ ಭಿತ್ತಿ ಪತ್ರವನ್ನು ಬಿಡುಗಡೆ ಮಾಡಿ ಮಾತನಾಡಿದರು.
ಪ್ರತಿ ಪರೀಕ್ಷಾ ಕೇಂದ್ರದಲ್ಲಿ 200 ಮಕ್ಕಳಿಗೆ ಒಂದರಂತೆ ಆರೋಗ್ಯ ತಪಾಸಣಾ ಕೌಂಟರ್ ಸ್ಥಾಪಿಸಲಾಗಿದೆ. ನಿಗದಿತ ಆರೋಗ್ಯ ತಪಾಸಣಾ ಕೌಂಟರ್‌ಗಳು ಪರೀಕ್ಷೆ ನಡೆಯುವ ದಿನಗಳಂದು ಬೆಳಗ್ಗೆ 8.30ರಿಂದ ಪರೀಕ್ಷಾ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೂ ತೆರೆದಿರುತ್ತವೆ.