ಕಣ್ಣೀರು ಹಾಕುತ್ತಿರುವ ಬೆಂಬಲಿಗರನ್ನು ಸಮಧಾನಪಡಿಸುತ್ತಿರುವ ಶ್ರೀರಾಮುಲು ಬಳ್ಳಾರಿ: ಬಳ್ಳಾರಿ ಗ್ರಾಮೀಣ ಕ್ಷೇತ್ರದಲ್ಲಿ ಸೋತ ಬಿಜೆಪಿ ನಾಯಕ ಬಿ. ಶ್ರೀರಾಮುಲು ಅವರ ಮನೆಗೆ ಧಾವಿಸುತ್ತಿರುವ ಬೆಂಬಲಿಗರು ತಮ್ಮ ನೆಚ್ಚಿನ ನಾಯಕನಿಗೆ ಬಂದಿರುವ ಸ್ಥಿತಿ ಕಂಡು ಕಣ್ಣೀರು ಹಾಕುತ್ತಿದ್ದಾರೆ. ಶ್ರೀರಾಮುಲು ಅವರೇ ಸಾಂತ್ವನ ಹೇಳಿ ಅವರನ್ನು ಕಳುಹಿಸುತ್ತಿದ್ದಾರೆ. ಬಳ್ಳಾರಿಯ ಗ್ರಾಮೀಣ ಭಾಗದಲ್ಲಿ ಹಳ್ಳಿಗಳಲ್ಲಿ ಅಭಿಮಾನಿಗಳು ಕಣ್ಣೀರು ಹರಿಸುತ್ತಿದ್ದಾರೆ.
ಸೋಲಿನ ಬಳಿಕ ಹಳ್ಳಿಗಳಲ್ಲಿ ಸಂಚಾರ ಮಾಡಿ ಸೋಲಿನ ಪರಾಮರ್ಶೆ ಮಾಡುತ್ತಿರುವ ಶ್ರೀರಾಮುಲು ಫಲಿತಾಂಶ ಪ್ರಕಟವಾದ ದಿನವೇ ಬಳ್ಳಾರಿ ತಾಲೂಕಿನ ಮೋಕಾಗೆ ಭೇಟಿ ನೀಡಿದ್ದರು. ಆ ಸಮಯದಲ್ಲಿ ಬೆಂಬಲಿಗನೊಬ್ಬ ಶ್ರೀರಾಮುಲು ಅವರ ಕಾಲಿಗೆರಗಿ ಕಣ್ಣೀರು ಹಾಕಿದಾಗ ಸುತ್ತ ಕುಳಿತಿದ್ದವರಲ್ಲಿ ಹೆಪ್ಪುಗಟ್ಟಿದ ದುಃಖ ಕಣ್ಣೀರಾಯಿತು.
ಬೆಂಬಲಿಗರನ್ನು ಕಂಡು ಭಾವೋದ್ವೇಗಕ್ಕೆ ಒಳಗಾದ ಶ್ರೀರಾಮುಲು ಅವರೂ ಕಣ್ಣೀರು ಹಾಕಿದರು. ಈ ಸಂದರ್ಭದಲ್ಲಿ ತೆಗೆದಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಬಳ್ಳಾರಿ ಗ್ರಾಮಾಂತರ ಕ್ಷೇತ್ರದಲ್ಲಿ ಸ್ಪರ್ಧಿಸಿ 30,000 ಮತಗಳ ಅಂತರದಿಂದ ಶಾಸಕ ನಾಗೇಂದ್ರ ವಿರುದ್ಧ ಶ್ರೀರಾಮುಲು ಸೋಲು ಕಂಡಿದ್ದಾರೆ.
ಇದನ್ನೂ ಓದಿ:ಸಿಎಂ ಸ್ಥಾನದ ಆಯ್ಕೆ ಕಾಂಗ್ರೆಸ್ ಪಕ್ಷದ ಆಂತರಿಕ ವಿಚಾರ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ
1999ರಲ್ಲಿ ರಾಜಕೀಯ ಜೀವನಕ್ಕೆ ಬಂದಿರುವ ಶ್ರೀರಾಮುಲು ಮೊದಲ ಬಾರಿ ಸೋತಿದ್ದರು, 2004 ರಿಂದ ಈವರೆಗೆ ಸೋತಿರಲಿಲ್ಲ. 2004 ಬಳ್ಳಾರಿ ನಗರ, 2008, 2011ರ ಉಪಚುನಾವಣೆ 2013 ಚುನಾವಣೆಯಲ್ಲಿ ಬಳ್ಳಾರಿ ಗ್ರಾಮಾಂತರದಲ್ಲಿ ಗೆದ್ದಿದ್ದರು. 2014ರಲ್ಲಿ ಕ್ಷೇತ್ರ ಬಿಟ್ಟು ಎಂಪಿಯಾಗಿದ್ದ ಶ್ರೀರಾಮುಲು 2018 ರಲ್ಲಿ ಮೊಳಕಾಲ್ಮೂರಿನಿಂದ ಗೆದ್ದು ಇದೀಗ ಸ್ವಕ್ಷೇತ್ರದಲ್ಲಿ ಸೋತಿದ್ದಾರೆ.
ಬಳ್ಳಾರಿ ಗ್ರಾಮೀಣ ಕ್ಷೇತ್ರದ ಹಿನ್ನೆಲೆ ನೋಡುವುದಾದರೆ, 2008ರಲ್ಲಿ ಕ್ಷೇತ್ರ ಪುನರ್ ವಿಂಗಡಣೆ ಬಳಿಕ ಅಸ್ತಿತ್ವಕ್ಕೆ ಬಂದ ಬಳ್ಳಾರಿ ಗ್ರಾಮೀಣ ವಿಧಾನಸಭಾ ಕ್ಷೇತ್ರ ಈವರೆಗೆ ಮೂರು ಸಾರ್ವತ್ರಿಕ ಚುನಾವಣೆಗಳನ್ನು ಹಾಗೂ ಎರಡು ಉಪ ಚುನಾವಣೆಗಳನ್ನು ಕಂಡಿದೆ. 2008ರಲ್ಲಿ ಬಿಜೆಪಿಯಿಂದ, 2011ರಲ್ಲಿ ನಡೆದ ಉಪ ಚುನಾವಣೆಯಲ್ಲಿ ಪಕ್ಷೇತರರಾಗಿ ಹಾಗೂ 2013ರಲ್ಲಿ ಬಿಎಸ್‌ಆರ್ ಕಾಂಗ್ರೆಸ್‌ನಿಂದ ಮೂರು ಬಾರಿ ಶ್ರೀರಾಮುಲು ಗೆದ್ದು ಶಾಸಕರಾಗಿದ್ದಾರೆ. 2014 ರಲ್ಲಿ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಎನ್ ವೈ ಗೋಪಾಲಕೃಷ್ಣ ಗೆಲುವು ಸಾಧಿಸಿದ್ದರೆ, 2018ರಲ್ಲಿ ಕಾಂಗ್ರೆಸ್‌ನಿಂದ ಬಿ. ನಾಗೇಂದ್ರ ಗೆಲುವು ಸಾಧಿಸಿದ್ದು ಕ್ಷೇತ್ರದ ವೈಶಿಷ್ಟ್ಯ.
ಇನ್ನು ಬಳ್ಳಾರಿ ಗ್ರಾಮೀಣ ಕ್ಷೇತ್ರದಿಂದ ಮೊದಲ ಬಾರಿಗೆ ಬಿಜೆಪಿಯಿಂದ ಸ್ಪರ್ಧಿಸಿದ್ದ ಬಿ.ಶ್ರೀರಾಮುಲು ಗೆಲುವು ಸಾಧಿಸಿದ್ದರು. ಬಳಿಕ, ಬಿಜೆಪಿಯಿಂದ ಮುನಿಸಿಕೊಂಡು ಸ್ವಂತ ಪಕ್ಷ ಬಿಎಸ್‌ಆರ್ ಕಾಂಗ್ರೆಸ್ ಸ್ಥಾಪಿಸಿ 2013ರಲ್ಲಿ ಮತ್ತೆ ಇದೇ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಆಗಲೂ ಅವರಿಗೆ ಗೆಲುವು ಒಲಿದಿತ್ತು. ಕಳೆದ ಚುನಾವಣೆಯಲ್ಲಿ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು ಪಡೆದಿದ್ದ ಶ್ರೀರಾಮುಲು, ಬಳ್ಳಾರಿ ಗ್ರಾಮೀಣ ಕ್ಷೇತ್ರದಲ್ಲಿ ತಮ್ಮ ಅದೃಷ್ಟ ಪರೀಕ್ಷೆಯಲ್ಲಿ ಈ ಬಾರಿ ಸೋಲು ಅನುಭವಿಸಿದ್ದಾರೆ.
ಇದನ್ನೂ ಓದಿ:ಮಕ್ಕಳಿಗೆ ಏನು ಕೊಡಬೇಕೆಂದು ತಾಯಿಗೆ ಗೊತ್ತಿದೆ: ನಾನೊಬ್ಬನೇ ದೆಹಲಿಗೆ ಹೋಗುತ್ತಿದ್ದೇನೆ: ಡಿಕೆಶಿ