ಹೊಸಪೇಟೆ: ಹಂಪಿ ಉತ್ಸವದಲ್ಲಿ ಪ್ರತಿ ಬಾರಿ ಶ್ರೀರಾಮುಲು ಅವರ ಹೆಸರು ಮುಂಚೂಣಿಯಲ್ಲಿರುತ್ತಿತ್ತು. ಆದರೆ, ಈ ಬಾರಿಯ ಸಾಂಕೇತಿಕ ಹಂಪಿ ಉತ್ಸದ ಆಮಂತ್ರಣ ಪತ್ರಿಕೆಯಲ್ಲಿ ಸಚಿವರ ಹೆಸರನ್ನೇ ಮುದ್ರಿಸದೇ ಇರುವುದು ಅಭಿಮಾನಿಗಳಲ್ಲಿ ಬೇಸರ ಮೂಡಿಸಿದೆ.
ಸಮಾಜ ಕಲ್ಯಾಣ ಇಲಾಖೆ ಸಚಿವ ಬಿ.ಶ್ರೀರಾಮುಲು ಅವರ ಹೆಸರನ್ನು ಆಹ್ವಾನ ಪತ್ರಿಕೆಯಲ್ಲಿ ಕೈಬಿಟ್ಟಿದ್ದು, ಶಿಷ್ಟಾಚಾರ ಪಾಲನೆಯಾಗಿಲ್ಲ ಎಂಬ ಆರೋಪಗಳು ಕೇಳಿ ಬಂದಿವೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾಡಳಿತದ ಸಂಯುಕ್ತಾಶ್ರಯದಲ್ಲಿ ವಿಜಯನಗರ ವೈಭವ ಸಾರುವ ಹಂಪಿ ಉತ್ಸವ ನ.13 ರಂದು ಜರುಗಲಿದೆ. ಕೋವಿಡ್ ಮಾರ್ಗಸೂಚಿ ಅನುಸಾರವೇ ಆಚರಣೆ ಮಾಡಲಾಗುತ್ತಿದೆ. ಕಾರ್ಯಕ್ರಮಕ್ಕೆ ಅರಣ್ಯ ಖಾತೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆನಂದ ಸಿಂಗ್ ಅವರು ಸಂಜೆ 4ಕ್ಕೆ ಉದ್ಧಾನ ವೀರಭದ್ರೇಶ್ವರ ದೇವಸ್ಥಾನದಿಂದ ಶೋಭಯಾತ್ರೆಗೆ ಚಾಲನೆ ನೀಡಲಿದ್ದಾರೆ.
ದೇವಸ್ಥಾನದಿಂದ ವಿರೂಪಾಕ್ಷೇಶ್ವರ ದೇವಸ್ಥಾನದವರೆಗೆ ವಿವಿಧ ಜಾನಪದ ಕಲಾ ತಂಡಗಳು ಶೋಭಾಯಾತ್ರೆಯಲ್ಲಿ ಭಾಗವಹಿಸಲಿವೆ. ಸಂಜೆ 7ಕ್ಕೆ ತುಂಗಾ ಆರತಿ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳು ಮತ್ತು ವಿಶೇಷ ಆಹ್ವಾನಿತರು ಮಾತ್ರ ಭಾಗವಹಿಸಲಿದ್ದಾರೆ.