ಬಳ್ಳಾರಿ :ಬಳ್ಳಾರಿ ನಗರಸಭೆ ಸದಸ್ಯನಿಂದ ಹಿಡಿದು ಇದೀಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸರ್ಕಾರದಲ್ಲಿ ನಾಲ್ಕನೆ ಬಾರಿಗೆ ಸಚಿವನಾದ ಹೆಗ್ಗಳಿಕೆಗೆ ಶ್ರೀರಾಮುಲು ಪಾತ್ರರಾಗಿದ್ದಾರೆ. 1998ರ ಆಸುಪಾಸಿನಲ್ಲಿ ಬಳ್ಳಾರಿ ಜಿಲ್ಲಾ ಕಾಂಗ್ರೆಸ್‌ನಿಂದ ನಗರಸಭೆ ಸದಸ್ಯರಾಗಿ ಆಯ್ಕೆಯಾದ ಹಾಲಿ ಸಚಿವ ಶ್ರೀರಾಮುಲು ಅವರು, 1999ರಲ್ಲಿ ಬಿಜೆಪಿಗೆ ಸೇರ್ಪಡೆಯಾದರು. 2004ರಲ್ಲಿ ಶ್ರೀರಾಮುಲು ಅವರು ಬಿಜೆಪಿ ಶಾಸಕರಾಗಿ ಆಯ್ಕೆಯಾದರು.
ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರದಲ್ಲಿ ಒಂದು ಬಾರಿ, ಮಾಜಿ ಸಿಎಂ ಬಿಎಸ್‌ವೈ ನೇತೃತ್ವದ ಸರ್ಕಾರದಲ್ಲಿ ಎರಡು ಬಾರಿ ಹಾಗೂ ಹಾಲಿ ಸಿಎಂ ಬಸವರಾಜ ಬೊಮ್ಮಾಯಿ ಸರ್ಕಾರದಲ್ಲಿ ಸಚಿವರಾಗಿದ್ದಾರೆ. ಈವರೆಗೆ ಐದು ಬಾರಿ ಶಾಸಕರಾಗಿ, ಒಂದು ಬಾರಿ ಸಂಸದರಾಗಿ ಆಯ್ಕೆಯಾಗಿದ್ದಾರೆ.
1999ರ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಮೊದಲ ಬಾರಿಗೆ ಬಿಜೆಪಿಯಿಂದ ಸ್ಪರ್ಧಿಸಿದ ಸಚಿವ ಶ್ರೀರಾಮುಲು ಅವರು, ಸೋಲನ್ನ ಅನುಭವಿಸಿದ್ದರು. 2004ರಲ್ಲಿ ಮರಳಿ ಬಿಜೆಪಿಯಿಂದ ಸ್ಪರ್ಧಿಸಿದ ಸಚಿವ ಶ್ರೀರಾಮುಲು, ಮೊದಲ ಬಾರಿಗೆ ಬಿಜೆಪಿ ಶಾಸಕರಾಗಿ ಆಯ್ಕೆಯಾಗಿ ಇಡೀ ರಾಜ್ಯದ ಗಮನ ಸೆಳೆದಿದ್ದರು.
ವಾಲ್ಮೀಕಿ ಸಮುದಾಯದ ಪ್ರಬಲ ನಾಯಕರಾದ ಇವರಿಗೆ ಅಲ್ಲಿಂದ ಈವರೆಗೆ ನಾಲ್ಕು ಬಾರಿ ಸಚಿವರಾಗುವ ಅವಕಾಶ ದೊರೆತಿದೆ. ರಾಜ್ಯ ಪ್ರವಾಸೋದ್ಯಮ, ವಿಮಾನಯಾನ, ಆರೋಗ್ಯ ಹಾಗೂ ಸಮಾಜ ಕಲ್ಯಾಣ ಸಚಿವರಾಗಿ ಕಾರ್ಯನಿರ್ವಹಿಸಿದ ಅನುಭವ ಕೂಡ ಇವರಿಗಿದೆ.