ಬಳ್ಳಾರಿ: ಇಲ್ಲಿನ ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆ (ವಿಮ್ಸ್) ಆಸ್ಪತ್ರೆಯಲ್ಲಿ ಸ್ಥಾಪಿಸಲಾದ ಮಹಾಮಾರಿ ಕೊರೊನಾ ವೈರಸ್ ಪತ್ತೆ ಮಾಡುವ ಪರೀಕ್ಷಾ ಲ್ಯಾಬ್ಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಇಂದು ಚಾಲನೆ ನೀಡಿದರು.
ವಿಮ್ಸ್ನಲ್ಲಿ ಕೊರೊನಾ ವೈರಾಣು ಪರೀಕ್ಷಾ ಲ್ಯಾಬ್ಗೆ ಚಾಲನೆ.. ಕೊರೊನಾ ವೈರಾಣು ಪರೀಕ್ಷಾ ಲ್ಯಾಬ್ಗೆ ಚಾಲನೆ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಶ್ರೀರಾಮುಲು ಅವರು, ಈ ಭಾಗದ ಬಹುದಿನಗಳ ಬೇಡಿಕೆ ಕೊನೆಗೂ ಈಡೇರಿದೆ. ಅದು ಈ ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲೇ ಕೊರೊನಾ ವೈರಾಣು ಪರೀಕ್ಷಾ ಪ್ರಯೋಗಾಲಯ ಶುರುವಾಗಿದೆ. ಮಹಾಮಾರಿ ಕೊರೊನಾ ಸೋಂಕಿನ ಪರೀಕ್ಷಾ ವರದಿ ಬೆಂಗಳೂರಿನಿಂದ ಬರುವಿಕೆಗಾಗಿ ಕಾಯೋದು ಇನ್ಮುಂದೆ ಅಗತ್ಯವೇನಿಲ್ಲ. ತತ್ಕ್ಷಣವೇ ಪರೀಕ್ಷಾ ವರದಿ ಲಭ್ಯವಾಗಲಿದೆ ಎಂದರು.
ವಿಮ್ಸ್ನಲ್ಲಿ ಆರಂಭಿಸಲಾಗಿರುವ ವೈರಾಣು ಸಂಶೋಧನಾ ಮತ್ತು ರೋಗ ಪರೀಕ್ಷಾ ಪ್ರಯೋಗಾಲಯವು ಸರ್ಕಾರದಿಂದ ಎಲ್ಲ ರೀತಿಯ ಪರಿಶೀಲನೆಗೆ ಒಳಪಟ್ಟು ಸುಸೂತ್ರ ಕಾರ್ಯಾರಂಭಕ್ಕೆ ಅನುಮತಿ ದೊರಕಿದೆ. ಈ ಪ್ರಯೋಗಾಲಯದಲ್ಲಿ ಒಂದು ಯಂತ್ರವಿದ್ದು, ಪ್ರತಿ ದಿನಕ್ಕೆ ಒಂದು ಶಿಫ್ಟ್‌ನಲ್ಲಿ 15 ಸ್ಯಾಂಪಲ್ ಪರೀಕ್ಷಿಸಬಹುದಾಗಿದೆ. ಈ ಪ್ರಯೋಗಾಲಯದಲ್ಲಿ ಎಲ್ಲ ರೀತಿಯ ವೈದ್ಯಕೀಯ ಪರಿಕರಗಳನ್ನು ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.
ಜಿಲ್ಲಾಡಳಿತದಿಂದ ಜಿಲ್ಲಾ ವಿಪತ್ತು ಪರಿಹಾರ ನಿಧಿ ಅಡಿಯಲ್ಲಿ 16.5 ಲಕ್ಷ ರೂ.ಮೊತ್ತದಲ್ಲಿ ಇನ್ನೊಂದು ವೈರಾಣು ಪರೀಕ್ಷಾ ಯಂತ್ರವನ್ನು ಖರೀದಿಸಲಾಗಿದೆ. ಇದು ಕೂಡ ಪ್ರತಿ ಶಿಫ್ಟ್‌ನಲ್ಲಿ 45 ಸ್ಯಾಂಪಲ್ ಪರೀಕ್ಷಿಸಲಿದೆ. ಎರಡು ಶಿಫ್ಟ್ಗಳಲ್ಲಿ ಎರಡು ಯಂತ್ರಗಳಿಂದ 110 ಸ್ಯಾಂಪಲ್‌ಗಳನ್ನು ಪ್ರತಿನಿತ್ಯ ಪರೀಕ್ಷಿಸಬಹುದಾಗಿದೆ ಎಂದು ಡಿಸಿ ಎಸ್ ಎಸ್ ನಕುಲ್ ತಿಳಿಸಿದ್ದಾರೆ.
ಇದೇ ವೇಳೆ ಬಳ್ಳಾರಿ ನಗರ ಶಾಸಕ ಗಾಲಿ ಸೋಮಶೇಖರರೆಡ್ಡಿ, ವಿಮ್ಸ್ ನಿರ್ದೇಶಕ ಡಾ.ದೇವಾನಂದ, ಸೂಪರಿಂಟೆಂಡೆಂಟ್ ಡಾ.ಮರಿರಾಜ, ಮೈಕ್ರೋಬಯೊಲಾಜಿ ವಿಭಾಗದ ಮುಖ್ಯಸ್ಥ ಡಾ.ಕೃಷ್ಣ ಇದ್ದರು.