ಬಳ್ಳಾರಿ :ಬೆಂಗಳೂರಿನಲ್ಲಿ ಮಾರ್ಚ್ 21 ರಿಂದ 22ರವರೆಗೆ ನಡೆದ ರಾಷ್ಟ್ರೀಯ ಮಟ್ಟದ ಈಜು ಸ್ಪರ್ಧೆಯಲ್ಲಿ ನಗರದ ವಿಶೇಷ ಚೇತನ ವಿದ್ಯಾರ್ಥಿಗಳು ಭಾಗವಹಿಸಿ 23 ಪದಕಗಳನ್ನು ಮುಡಿಗೇರಿಸಿಕೊಂಡಿದ್ದಾರೆ.
ನಗರದ ನವಜೀವನ ಸಂಸ್ಥೆಯಲ್ಲಿ ಅಭ್ಯಾಸ ಮಾಡುತ್ತಿರುವ 9 ವಿಶೇಷ ಚೇತನ ವಿದ್ಯಾರ್ಥಿಗಳ ತಂಡ ಚಿನ್ನದ ಪದಕಗಳನ್ನು ಗೆಲ್ಲುವ ಮೂಲಕ ವಿಶಿಷ್ಟ ಸಾಧನೆ ಮಾಡಿದೆ. ಚಿನ್ನದ ಪದಕ ಪಡೆದವರಲ್ಲಿ ಹೆಚ್ ಮಹಾಂತೇಶ್, ರಮ್ಯಾ ಹಾಗೂ ಅರುಣ್ ಎಂಬ ಮೂವರು ಅಂಧ ವಿದ್ಯಾರ್ಥಿಗಳು ಇರುವುದು ವಿಶೇಷ. ಅದರಲ್ಲೂ ಮಹಾಂತೇಶ್ ಮತ್ತು ರಮ್ಯಾ ಇಬ್ಬರು ಸಹೋದರರಾಗಿದ್ದಾರೆ.
ಈಜು ಸ್ಪರ್ಧೆಯಲ್ಲಿ ವಿಶಿಷ್ಟ ಸಾಧನೆಗೈದ ವಿಶೇಷ ಚೇತನರು ನೆರೆಯ ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ರಾಯದುರ್ಗ ತಾಲೂಕಿನ ಡಿ.ಹಿರೇಹಾಳು ಮಂಡಲದ ಸಹೋದರರಾದ ಹೆಚ್ ಮಹಾಂತೇಶ್ ಮತ್ತು ಹೆಚ್ ರಮ್ಯಾ ಹುಟ್ಟು ಅಂಧರಾಗಿದ್ದಾರೆ.
ಆದರೂ ಈಜಾಟದಲ್ಲಿ ಮಾತ್ರ ಚಿನ್ನದ ಪದಕ ಗೆಲ್ಲುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಚಿನ್ನ ಗೆದ್ದ ವಿದ್ಯಾರ್ಥಿಗಳೆಲ್ಲರೂ ಈಜು ತರಬೇತುದರರಾದ ರಜನಿ ಲಕ್ಕ ಅವರಿಂದ ತರಬೇತಿ ಪಡೆಯುತ್ತಿದ್ದಾರೆ.
ಓದಿ : 2ಎ ಮೀಸಲಾತಿ ನೀಡದಿದ್ದರೆ ಮತ್ತೆ ಕಾನೂನು ಹೋರಾಟ.. ಬಸವ ಜಯಮೃತ್ಯುಂಜಯ ಸ್ವಾಮೀಜಿ
ವಿದ್ಯಾರ್ಥಿಗಳ ಸಾಧನೆ ಕುರಿತು ಈಟಿವಿ ಭಾರತ್ ಜೊತೆ ಮಾತನಾಡಿದ ಈಜು ತರಬೇತುದಾರರಾದ ರಜನಿ ಲಕ್ಕ, ನಾನು ಸತತ ಮೂರು ದಶಕದಿಂದಲೂ ಈಜು ಸ್ಪರ್ಧೆಗೆ ತರಬೇತಿ ನೀಡುತ್ತಿದ್ದೇನೆ. ಆದರೆ, ಈ ಬಾರಿಯ ಈಜು ಸ್ಪರ್ಧೆ ಮಾತ್ರ ನನಗೆ ಸಂತೋಷ ತಂದಿದೆ.
ಯಾಕೆಂದರೆ, ಮೂವರು ಅಂಧ ವಿದ್ಯಾರ್ಥಿಗಳು ಈ ಬಾರಿ ಚಿನ್ನದ ಪದಕ ಗೆದ್ದಿದ್ದಾರೆ. ಒಟ್ಟು 23 ಪದಕ ಬಂದಿವೆ. ಈ ಪೈಕಿ 16 ಚಿನ್ನ ಹಾಗೂ 7 ಬೆಳ್ಳಿ ಪದಕಗಳಿವೆ ಎಂದು ಹೇಳಿದರು. ವಿದ್ಯಾರ್ಥಿನಿ ರಮ್ಯಾ ಮಾತನಾಡಿ, ರಾಷ್ಟ್ರೀಯ ಮಟ್ಟದ ಈಜು ಸ್ಪರ್ಧೆಯಲ್ಲಿ ಭಾಗಿಯಾಗಿರುವುದು ನನಗೆ ಖುಷಿ ಕೊಟ್ಟಿದೆ ಎಂದರು.