ಬಳ್ಳಾರಿ: ಇಲ್ಲಿನ ವಿಮ್ಸ್ ಆಸ್ಪತ್ರೆ ಕ್ರೀಡಾಂಗಣದ ಎದುರಿನ ಶಾಂತಿಧಾಮದಲ್ಲಿರುವ ಬುದ್ಧಿಮಾಂದ್ಯ ಹಾಗೂ ನಿರ್ಗತಿಕ ಮಕ್ಕಳ ತುರ್ತು ಆರೋಗ್ಯ ಸೇವೆಗಾಗಿ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಅವರು ಪ್ರತ್ಯೇಕ ವಾಹನವೊಂದನ್ನ ಇಲಾಖೆ ಸುಪರ್ದಿಗೆ ನೀಡಿದ್ದಾರೆ. ಖಾಸಗಿ ವಾಹನಗಳತ್ತ ಮೊರೆ ಹೋಗುತ್ತಿರೋದನ್ನ ಮನಗಂಡ ಡಿಸಿ ಈ ಕ್ರಮ ಕೈಗೊಂಡಿದ್ದಾರೆ.
ಕಳೆದ ಮೂರ್ನಾಲ್ಕು ವರ್ಷಗಳಿಂದಲೂ ಜಿಲ್ಲಾಡಳಿತಕ್ಕೆ ಈ ಬುದ್ಧಿಮಾಂದ್ಯ, ನಿರ್ಗತಿಕ ಹಾಗೂ ಅನಾಥ ಮಕ್ಕಳ ಆರೋಗ್ಯದಲ್ಲಿ ಏರುಪೇರಾದ ಸಂದರ್ಭದಲ್ಲಿ ವಿಮ್ಸ್ ಅಥವಾ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ಎಂದು ಕರೆದೊಯ್ಯಲು ಪ್ರತ್ಯೇಕ ವಾಹನ ಕಲ್ಪಿಸುವಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕೋರಿತ್ತು. ಇತ್ತೀಚೆಗೆ ಶಾಂತಿಧಾಮಕ್ಕೆ ಡಿಸಿ ನಕುಲ್, ಭೇಟಿ ನೀಡಿದ ಸಂದರ್ಭ ಈ ಕುರಿತು ಮತ್ತೊಮ್ಮೆ ಮನವಿ ಮಾಡಲಾಗಿತ್ತು. ಅದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಡಿಸಿ ನಕುಲ್ ಅವರು ತಕ್ಷಣದಲ್ಲಿಯೇ ಟಾಟಾ ಸುಮೋ ವಾಹನವೊಂದನ್ನ ಇಲಾಖೆಯ ಸುಪರ್ದಿಗೆ ನೀಡಿದ್ದಾರೆ ಎಂದು ಇಲಾಖೆಯ ಉಪ ನಿರ್ದೇಶಕ ಆರ್.ನಾಗರಾಜ ಈ ಟಿವಿ ಭಾರತಕ್ಕೆ ತಿಳಿಸಿದ್ದಾರೆ.
ಜಿಲ್ಲಾಧಿಕಾರಿ ನಕುಲ್ ಅವರ ಈ ವಿಶೇಷ ಕಾಳಜಿಗೆ ಇಡಿ ಇಲಾಖೆಯೇ ಫಿದಾ ಆಗಿದೆ. ಏಕೆಂದರೆ ಇಷ್ಟುದಿನ ಬುದ್ಧಿಮಾಂದ್ಯ, ನಿರ್ಗತಿಕ ಹಾಗೂ ಅನಾಥ ಮತ್ತು ಸಖಿ ಘಟಕದ ಮಹಿಳೆಯರ ಆರೋಗ್ಯದಲ್ಲಿ ಏರುಪೇರಾದರೆ ಖಾಸಗಿ ವಾಹನ ಅಥವಾ ಆಟೋರಿಕ್ಷಾಗಳ ಮೊರೆ ಹೋಗಲಾಗುತ್ತಿತ್ತು. ಕೆಲವೊಮ್ಮೆ ಈ ಖಾಸಗಿ ವಾಹನಗಳು ಸಮಯಾನುಸಾರ ಸಿಗದೇ ನಮ್ಮ ಇಲಾಖೆಯ ಸಿಬ್ಬಂದಿ ಹೆಣಗಾಡಿದ ಉದಾಹರಣೆ ಇದೆ. ಅಂತಹ ಸಂದರ್ಭದಲ್ಲಿ ಏನು ಮಾಡಬೇಕೆಂದು ಕೂಡ ತೋಚುತ್ತಿರಲಿಲ್ಲ. ಪ್ರತ್ಯೇಕ ವಾಹನದ ವ್ಯವಸ್ಥೆ ಇಲ್ಲದೇ ತೊಂದರೆ ಎದುರಿಸಿದ್ದೇವೆ. ಈ ಎಲ್ಲ ಅಂಶಗಳನ್ನ ಜಿಲ್ಲಾಡಳಿತಕ್ಕೆ ತಿಳಿಸಲಾಗಿತ್ತು. ಈಗ ಡಿಸಿ ನಕುಲ್ ಸಕಾರಾತ್ಮಕವಾಗಿ ಸ್ಪಂದಿಸಿರೋದು ನಮಗೆ ವಿಶೇಷವಾಗಿ ಖುಷಿ ತಂದಿದೆ ಎಂದಿದ್ದಾರೆ.