ಹೊಸಪೇಟೆ:ಅಮೆರಿಕ ದೇಶವು ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ ಮತ್ತು ಶೈಕ್ಷಣಿಕವಾಗಿ ಎಲ್ಲಾ ಕ್ಷೇತ್ರದಲ್ಲಿ ಮುಂದುವರೆದ ದೇಶ. ಆದರೆ ಅಲ್ಲಿ ಬಹಳ ಮುಖ್ಯವಾಗಿ ಕರಿಯರು ಮತ್ತು ಬಿಳಿಯರು ಎಂಬ ವರ್ಣ ತಾರತಮ್ಯ ಯಾವಾಗ ನಾಶವಾಗುತ್ತೋ ಆಗ ಅಮೆರಿಕ ದೇಶ ಶ್ರೇಷ್ಠವಾಗುತ್ತೆ ಎಂದು ಅಮೆರಿಕದ ಅನಿವಾಸಿ ಭಾರತೀಯ ಡಾ. ಅಮರ್‌ಕುಮಾರ್ ಹೇಳಿದರು.
ಹಂಪಿ ಕನ್ನಡ ವಿವಿಯಲ್ಲಿ ನಿನ್ನೆ ಭುವನ ವಿಜಯ ಸಭಾಂಗಣದಲ್ಲಿ ಅಮೆರಿಕದಲ್ಲಿನ ಸಾಂಸ್ಕೃತಿಕ ಪಲ್ಲಟಗಳು ಹಾಗೂ ಭಾರತದ ಸಾಂಸ್ಕೃತಿಕ ಸಂದರ್ಭದ ಪ್ರಶ್ನೆಗಳು ಎಂಬ ವಿಷಯ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ವಿಶೇಷ ಉಪನ್ಯಾಸ ನೀಡಿದರು.
ಆರ್ಥಿಕ ವ್ಯವಸ್ಥೆಯಿಂದ ಎಷ್ಟೋ ವಿಚಾರಗಳು ಅಮೆರಿಕದಲ್ಲಿ ಮುಚ್ಚಿ ಹೋಗಿವೆ. ಲಾಸ್ ಎಂಜಲೀಸ್ ಅತೀ ಹೆಚ್ಚು ಭಿಕ್ಷುಕರಿರುವ ನಗರ ಎಂದು ಹೆಸರಾಗಿದೆ. ಅವರ ಸ್ಥಿತಿ ತುಂಬಾ ಚಿಂತಾಜನಕವಾಗಿದೆ. ಇನ್ನು ಅಮೆರಿಕ ಆದಿವಾಸಿಗಳ ಜೀವನವೇ ಬೇರೆ ರೀತಿಯಲ್ಲಿದೆ ಎಂದು ಹೇಳಿದರು.
ಅಮೆರಿಕ ಸಮಾನತೆ, ಆರ್ಥಿಕತೆ, ಸಾಮಾಜಿಕ ಸ್ಥಾನಮಾನದಿಂದ ಜಗತ್ತಿಗೆ ದೊಡ್ಡಣ್ಣ ಎನಿಸಿಲ್ಲ. ಟೆಕ್ನಾಲಾಜಿ, ವೆಪನ್ ಮಾರಾಟದಿಂದ ದೊಡ್ಡಣ್ಣ ಎಂಬ ಹೆಸರು ಪಡೆದಿದೆ. ಪ್ರಸ್ತುತ ಅಮೆರಿಕದಲ್ಲಿ 80%ರಷ್ಟು ಡ್ರಗ್ಸ್, ವೆಪನ್ ಮಾರಾಟದಿಂದಲೇ ದೇಶ ಗುರುತಿಸಿಕೊಂಡಿರುವ ವಿಷಯ ಬೆಳಕಿಕೆಗೆ ಬಂದಿದೆ. ಕೇವಲ ಶೇ. 3ರಷ್ಟು ಇರುವ ಉದ್ದಿಮೆದಾರರೇ ಇಂದು ಅಮೆರಿಕದ ಸೂತ್ರದಾರರಾಗಿದ್ದಾರೆ. ಅಲ್ಲಿನ ಕರಿಯ ಮತ್ತು ಮಧ್ಯಮ ವರ್ಗದವರು ಇಂದಿಗೂ ಗುಲಾಮಗಿರಿಯ ತೂಗುಯ್ಯಾಲೆಯಲ್ಲಿದ್ದಾರೆ.
ಅಮೆರಿಕದಲ್ಲಿ ಪೌರತ್ವಕ್ಕಿಂತ ವೆಪನ್ ಪರವಾನಗಿಯೇ ಹೆಚ್ಚಾಗಿದೆ ಎಂದು ವಿಷಾದಿಸಿದರು. ಇನ್ನು ಮಾನವೀಯ ಗುಣ ಉಳ್ಳವನು ವಿಶ್ವಮಾನವನಾದರೆ, ಅಮಾನವೀಯತೆ ಇಲ್ಲದವ ಅಲ್ಪ ಮಾನವನಾಗುತ್ತಾನೆ. ಈ ದೃಷ್ಟಿಯಲ್ಲಿ ಅಮೆರಿಕ ಹುಟ್ಟಿರುತ್ತದೆ ಎಂದು ಹೇಳಿದರು.