ಬಳ್ಳಾರಿ:ಮಹಾನಗರ ಪಾಲಿಕೆ ಚುನಾವಣೆ ಹಿನ್ನೆಲೆ ಮತದಾನ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿದ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ವರಿಷ್ಠಾಧಿಕಾರಿ ಜೇಬಿನಲ್ಲಿ ಮೊಬೈಲ್ ಇಟ್ಟುಕೊಂಡಿದ್ದ ಏಜೆಂಟ್ ಅನ್ನು ಎದ್ದು ಹೊರ ಹೋಗಿ ಎಂದು ಆದೇಶಿಸಿದ ಘಟನೆ ನಡೆದಿದೆ.
ಡಿಸಿ ಮತ್ತು ಎಸ್ಪಿ ಮತಗಟ್ಟೆಗೆ ಭೇಟಿ ನೀಡಿದ ವೇಳೆ ಸಿಬ್ಬಂದಿ ಮೊಬೈಲ್ ನಲ್ಲಿ ಮಗ್ನ
ಬಳ್ಳಾರಿ ಮಹಾನಗರ ಪಾಲಿಕೆ ಚುನಾವಣೆ ಹಿನ್ನೆಲೆ ಜಿಲ್ಲಾಧಿಕಾರಿ ಮತ್ತು ಎಸ್ಪಿ ಮತಗಟ್ಟೆಗೆ ಭೇಟಿ ನೀಡಿದ್ದರು. ಈ ವೇಳೆ ಮೊಬೈಲ್ನಲ್ಲಿ ಮಗ್ನರಾಗಿದ್ದ ಪೊಲೀಸ್ ಸಿಬ್ಬಂದಿ ಮತ್ತು ಚುನಾವಣಾ ಏಜೆಂಟ್ರನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತರಾಟೆಗೆ ತೆಗೆದುಕೊಂಡಿದ್ದಾರೆ.
ಗ್ರಾಮಾಂತರ ಪ್ರದೇಶದ ಅಲ್ಲಿಪುರದ ಧಾರಮಿಲ್ಲಿನ ಹತ್ತಿರದ ಸರ್ಕಾರಿ ಪ್ರಾಥಮಿಕ ಶಾಲೆಗೆ ಜಿಲ್ಲಾಧಿಕಾರಿ ಪವನ್ ಕುಮಾರ್ ಮಾಲಪಾಟಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೈದುಲು ಅಡಾವತ್ ಅವರು ಭೇಟಿ ನೀಡಿದ ವೇಳೆ ಈ ಘಟನೆ ನಡೆದಿದೆ. ಮಾಸ್ಕ್ ಗಳನ್ನು ವಿತರಿಸಿ ಮತದಾರರಿಗೆ ಸಾಮಾಜಿಕ ಅಂತರದೊಂದಿಗೆ, ಮತದಾನ ಮಾಡಿ ಎಂದು ಎಚ್ಚರಿಕೆ ನೀಡಿದರು.
ಕೌಲಬಜಾರ್ ಪ್ರದೇಶದ ಮಹಮ್ಮದಿಯ ಕಾಲೇಜ್ ನ ಮತಗಟ್ಟೆಗೆ ಭೇಟಿ ನೀಡಿದ ಕ್ಷಣದಲ್ಲಿ, ಪ್ರವೇಶ ದ್ವಾರದಲ್ಲಿ ಪೊಲೀಸ್ ಕಾನ್ಸ್ಟೇಬಲ್ ಮೊಬೈಲ್ ನೋಡುತ್ತಾ ಕುಳಿತಿದ್ದನ್ನು ಸಹ ಎಸ್ಪಿ ಪ್ರಶ್ನಿಸಿದರು. ಜಿಲ್ಲಾಧಿಕಾರಿ ಪವನ್ ಕುಮಾರ್ ಮಾಲಪಾಟಿ ಅವರು ಮತಗಟ್ಟೆಗೆ ಭೇಟಿ ನೀಡಿದಾಗ ಥರ್ಮಲ್ ಸ್ಯ್ಕಾನರ್ ಹೇಗೆ ? ಬಳಕೆ ಮಾಡಬೇಕು ಎಂದು ಆಶಾ ಕಾರ್ಯಕರ್ತೆಗೆ ಸಹ ಪ್ರಶ್ನೆ ಮಾಡಿದ್ರು.