ಬಳ್ಳಾರಿ:ಸಹೋದರ ಹಾಲಿ ಗಂಗಾವತಿ ಶಾಸಕ ಜನಾರ್ದನ ರೆಡ್ಡಿ ವಿರುದ್ಧ ಮಾಜಿ ಶಾಸಕ ಸೋಮಶೇಖರ ರೆಡ್ಡಿ ಮತ್ತೊಮ್ಮೆ ತೀವ್ರ ವಾಗ್ದಾಳಿ ನಡೆಸಿದ್ದಾರೆ. ವಿಧಾನಸಭಾ ಚುನಾವಣೆಯಲ್ಲಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಮೂಲಕ ಗೆದ್ದು ಶಾಸಕರಾಗಿರುವ ಜನಾರ್ದನ ರೆಡ್ಡಿ ಅವರ, 'ನಾನು ಬೆಳಸಿದ ಹೇಡಿಗಳು ಈಗ ಮನೆಯಲ್ಲಿದ್ದಾರೆ. ನಾನು ಸದನಕ್ಕೆ ಬಂದಿದ್ದೇನೆ' ಎನ್ನುವ ಹೇಳಿಕೆ ವಿರುದ್ಧ ಮಾಜಿ ಶಾಸಕ ಸೋಮಶೇಖರ್ ರೆಡ್ಡಿ ಆಕ್ರೋಶಗೊಂಡಿದ್ದಾರೆ.
ಬಳ್ಳಾರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮಾಜಿ ಶಾಸಕ ಜನಾರ್ದನ ರೆಡ್ಡಿ ನಮ್ಮನ್ನು ಬಳಸಿಕೊಂಡು ಅವರ ಬೇಳೆ ಬೇಯಿಸಿಕೊಂಡರು. ಜನಾರ್ದನ ರೆಡ್ಡಿ ಹಿಂದೆ ಎಲ್ಲರನ್ನೂ ಖರೀದಿ ಮಾಡಿ ಕರುಣಾಕರ ರೆಡ್ಡಿ ಅವರನ್ನು ಗೆಲ್ಲಿಸಿದ್ದರು. ಈ ಬಾರಿ ಕಾಂಗ್ರೆಸ್, ಬಿಜೆಪಿಯಲ್ಲಿ ಇರುವವರನ್ನು ಖರೀದಿ ಮಾಡಿ ಕೆಆರ್ಪಿಪಿ ಪರವಾಗಿ ಕೆಲಸ ಮಾಡುವಂತೆ ಮಾಡಿದ್ದಾರೆ ಎಂದರು.
ನಾನು ಬೆಳಸಿದ ಹೇಡಿಗಳು ಮನೆಯಲ್ಲಿದ್ದಾರೆ. ನಾನು ಸದನಕ್ಕೆ ಬಂದಿದ್ದೇನೆ ಅಂತಾ ಜನಾರ್ದನ ರೆಡ್ಡಿ ಹೇಳಿದ್ದಾರೆ. ನನಗೆ ಮತ್ತು ಶ್ರೀರಾಮುಲು, ಸೋಮಲಿಂಗಪ್ಪ, ಸುರೇಶ ಬಾಬು, ಕರುಣಾಕರ ರೆಡ್ಡಿಗೆ ರಣಹೇಡಿ ಅಂತಾ ಕರೆದಿದ್ದಾರೆ. ಆದರೆ ನಿಜವಾದ ರಣಹೇಡಿ ಜನಾರ್ದನರೆಡ್ಡಿ; ನಾವಲ್ಲ ಎಂದು ಸೋಮಶೇಖರ ರೆಡ್ಡಿ ಆಕ್ರೋಶ ಹೊರಹಾಕಿದ್ದಾರೆ.
ಅವನು ನಮ್ಮನ್ನು ಬಳಸಿಕೊಂಡು ಅವನ ಬೇಳೆ ಬೇಯಿಸಿಕೊಂಡ. ನಮ್ಮನ್ನು ಬಳಸಿಕೊಂಡು ಜನಾರ್ದನ ರೆಡ್ಡಿ ಅಕ್ರಮವಾಗಿ ಹಣ ಗಳಿಸಿದ. ಅಷ್ಟೇ ಅಲ್ಲ. ಜನಾರ್ದನ ರೆಡ್ಡಿಯ ಚಿಕ್ಕಂದಿನಿಂದ ಒಂದು ಗುಣವನ್ನು ಜಾಲಾಡಿದ್ದಾರೆ. ಯಾರೇ ಆಗಲಿ ಅವರೆಲ್ಲಾ ಅವನ ಕೈ ಕೆಳಗೆ ಇರಬೇಕು. ಅವನು ಹೇಳಿದ್ದು ಕೇಳಲಿಲ್ಲ ಎಂದರೆ ಅವನು ಎಲ್ಲರನ್ನೂ ಡೆಮಾಲಿಷ್ ಮಾಡ್ತಾನೆ. ಆದರೆ, ಇಂದು ನಾವೆಲ್ಲಾ ಒಂದಾಗಿದ್ದೇವೆ. ನಾವೂ ಜನಾರ್ದನ ರೆಡ್ಡಿಯನ್ನು ಎದುರಿಸುತ್ತೇವೆ. ಸಂಸತ್ ಚುನಾವಣೆಯಲ್ಲಿ ನಮ್ಮ ಬಲ ತೋರಿಸುತ್ತೇವೆ ಎಂದು ಸಹೋದರ ಸೋಮಶೇಖರ ರೆಡ್ಡಿ ಸವಾಲು ಹಾಕಿದ್ದಾರೆ.
ಜನಾರ್ದನ ರೆಡ್ಡಿ ಪತ್ನಿ ಲಕ್ಷ್ಮಿ ಅರುಣಾ ಬಳ್ಳಾರಿ ನಗರ ಕ್ಷೇತ್ರದಿಂದ ಕೆಆರ್ಪಿಪಿಯಿಂದ ಸ್ಪರ್ಧೆ ಮಾಡಿದ್ದರು. ಇನ್ನು ಇಲ್ಲಿ ಜನಾರ್ದನ ರೆಡ್ಡಿ ಸಹೋದರ ಸೋಮಶೇಖರ ರೆಡ್ಡಿ ಬಿಜೆಪಿಯಿಂದ ಸ್ಪರ್ಧೆ ಮಾಡಿದ್ದರು. ಇಲ್ಲಿ ಸೊಸೆ ಹಾಗೂ ಭಾವನ ನಡುವಣ ಪೈಟ್ನಲ್ಲೊ ಕಾಂಗ್ರೆಸ್ನ ನಾರ ಭರತ್ ರೆಡ್ಡಿ ಗೆಲುವಿನ ನಗೆ ಬೀರಿದ್ದರು.
ಜನಾರ್ದನ ರೆಡ್ಡಿ ಜೈಲಲ್ಲಿ ಇದ್ದಾಗ ಸೋಮಶೇಖರ್ ರೆಡ್ಡಿ ತಮ್ಮನ ಪರ ಕೋರ್ಟ್ಗಳಲ್ಲಿ ಹೋರಾಟ ನಡೆಸಿದ್ದರು. ಇನ್ನು ಗೆಳೆಯ ಶ್ರೀರಾಮುಲು ಸಹ ಬೆಂಬಲಕ್ಕೆ ನಿಂತಿದ್ದರು. ಆದರೆ ಬದಲಾದ ಕಾಲಘಟ್ಟದಲ್ಲಿ ಸೋಮಶೇಖರ್ ರೆಡ್ಡಿ, ಕರುಣಾಕರ ರೆಡ್ಡಿ ಹಾಗೂ ಗೆಳೆಯ ಶ್ರೀರಾಮುಲು ಬಿಜೆಪಿಯಲ್ಲೇ ಉಳಿದುಕೊಂಡಿದ್ದು, ಅದೇ ಪಕ್ಷದಿಂದ ಸ್ಪರ್ಧಿಸಿ ಚುನಾವಣೆಯಲ್ಲಿ ಸೋಲು ಅನುಭವಿಸಿದ್ದಾರೆ. ಈಗ ಸೋಮಶೇಖರ್ ರೆಡ್ಡಿ ಜನಾರ್ದನ ರೆಡ್ಡಿ ವಿರುದ್ಧವೇ ಆಕ್ರೋಶ ವ್ಯಕ್ತಪಡಿಸಿರುವುದು ರಾಜ್ಯ ರಾಜಕೀಯದಲ್ಲಿ ಕುತೂಹಲ ಕೆರಳಿಸಿದೆ.
ಇದನ್ನೂ ಓದಿ:ತಿರುಪತಿ ಮಾದರಿಯಲ್ಲಿ ಅಂಜನಾದ್ರಿ ಅಭಿವೃದ್ಧಿ - ಕ್ಷೇತ್ರದ ಜನರಿಗೆ ಡಬಲ್ ಬೆಡ್ ರೂಂ ಮನೆ: ರೆಡ್ಡಿ ಅಭಯ