ಬಳ್ಳಾರಿ: ಗಣಿನಗರಿ ಬಳ್ಳಾರಿಯ ರೈಲು ನಿಲ್ದಾಣದ ಮಹಡಿಯ ಮೇಲೆ ಸೋಲಾರ್ ಪ್ಲಾಂಟ್ಗಳನ್ನು ಅಳವಡಿಸಿದ್ದು, ಇದರಿಂದಾಗಿ ತಿಂಗಳಿಗೆ ಅಂದಾಜು 2 ಲಕ್ಷ ರೂ.ಗಳವರೆಗೂ ವಿದ್ಯುತ್ ಬಿಲ್ ಉಳಿತಾಯ ಆಗಲಿದೆ.
ಹೌದು, ಇಲ್ಲಿನ ರೈಲು ನಿಲ್ದಾಣದಲ್ಲಿ ಈ ಸೋಲಾರ್ ವಿದ್ಯುತ್ ಪ್ಲಾಂಟ್ ಅಳವಡಿಕೆ ಮುನ್ನ ಪ್ರತಿ ತಿಂಗಳಿಗೆ ಅಂದಾಜು 4.50 ಲಕ್ಷ ರೂ.ಗಳವರೆಗೆ ವಿದ್ಯುತ್ ಬಿಲ್ ಪಾವತಿಸಬೇಕಿತ್ತು. ಆದರೀಗ, ಕೇವಲ 2.50 ಲಕ್ಷ ರೂ. ಮಾತ್ರ ವಿದ್ಯುತ್ ಬಿಲ್ ಬರುತ್ತಿದೆಯಂತೆ. ಬರೋಬ್ಬರಿ 2 ಲಕ್ಷ ರೂ.ಗಳವರೆಗೂ ಕೂಡ ಪ್ರತಿ ತಿಂಗಳಿಗೆ ಉಳಿತಾಯ ಆಗಲಿದೆ. ಇದರಿಂದ ಪ್ರತಿವರ್ಷ ಸರಿಸುಮಾರು 24 ಲಕ್ಷ ರೂ.ಗಳವರೆಗೆ ಉಳಿತಾಯವಾಗಲಿದೆ ಎಂದು ರೈಲ್ವೆ ಇಲಾಖೆಯ ಮೂಲಗಳು ತಿಳಿಸಿವೆ.
ರೈಲು ನಿಲ್ದಾಣದಲ್ಲಿ ಅಳವಡಿಸಿರುವ ಸೋಲಾರ್ ಪ್ಲಾಂಟ್ ಕಳೆದ 2019 ರಲ್ಲಿ ಈ ಸೋಲಾರ್ ಪ್ಲಾಂಟ್ಅನ್ನು ಅಳವಡಿಸಲಾಗಿದೆ. ಬರೋಬ್ಬರಿ 720 ಯುನಿಟ್ಸ್ ವಿದ್ಯುತ್ ಉತ್ಪಾದನೆಯಾಗುತ್ತಿದೆ (ಪ್ರತಿ ತಿಂಗಳಿಗೆ 15000- 16000 ಸಾವಿರ ಯುನಿಟ್ಸ್). ಬಳ್ಳಾರಿ ರೈಲು ನಿಲ್ದಾಣದಲ್ಲಿನ ಎಸಿ, ಸೀಲಿಂಗ್ ಫ್ಯಾನ್, ವಿದ್ಯುತ್ ಬಲ್ಬ್, ಟಿವಿ ಹಾಗೂ ಕಂಪ್ಯೂಟರ್ ಮತ್ತು ಸಿಗ್ನಲ್ ಲೈಟ್ ಸೇರಿದಂತೆ ಎಲ್ಲವೂ ಕೂಡ ಈಗ ಸೋಲಾರ್ ವಿದ್ಯುತ್ನಲ್ಲೇ ಬೆಳಗುತ್ತಿವೆ. ಈ ಹಿಂದೆ ಇವಿಷ್ಟೇ ಉಪಯೋಗವಾದ್ರೂ ಕೂಡ ಅಂದಾಜು 4.50 ಲಕ್ಷ ರೂ.ಗಳವರೆಗೆ ವಿದ್ಯುತ್ ಬಿಲ್ ಬರುತ್ತಿತ್ತು. ಈಗ ಅದಕ್ಕೆ ಕಡಿವಾಣ ಬಿದ್ದಿದೆ.
ಕೆಇಬಿಗೆ ಮಾರಾಟ: ಬೇಸಿಗೆ ಕಾಲದಲ್ಲಿ ಅತೀ ಹೆಚ್ಚು ಸೋಲಾರ್ ವಿದ್ಯುತ್ ಉತ್ಪಾದನೆಯಾಗಲಿದೆ. ಸರಿ ಸುಮಾರು 300- 400 ಯುನಿಟ್ಸ್ ವರೆಗೂ ಹೆಚ್ಚುವರಿ ವಿದ್ಯುತ್ ಉತ್ಪಾದನೆಯಾಗಲಿದ್ದು, ಅದನ್ನ ಯುನಿಟ್ಗೆ ಅಂದಾಜು 8.90 ರೂ.ಗಳಿಗೆ ಮಾರಾಟ ಮಾಡಲಾಗುತ್ತಿದೆ. ಇದಲ್ಲದೇ, ಹೊಸಪೇಟೆ ರೈಲ್ವೆ ನಿಲ್ದಾಣದಲ್ಲೂ ಸಹ ಈ ಸೋಲಾರ್ ಪ್ಲಾಂಟ್ಅನ್ನ ಅಳವಡಿಸಲಾಗಿದೆ ಎಂದು ಬಳ್ಳಾರಿ ರೈಲು ನಿಲ್ದಾಣದ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.