ಬಳ್ಳಾರಿ: ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರುವ ರಾಜಕಾಲುವೆಗಳನ್ನು ಅವೈಜ್ಞಾನಿಕವಾಗಿ ನಿರ್ಮಿಸಿರುವ ಕಾರಣ ಬಹುತೇಕ ಆಶ್ರಯ ಮನೆಗಳು ಮತ್ತು ಕೊಳಗೇರಿ ನಿವಾಸಿಗಳು ನರಕಯಾತನೆ ಅನುಭವಿಸುತ್ತಿದ್ದಾರೆ. ಹೀಗಾಗಿ, ಅಲ್ಲಿನ ನಿವಾಸಿಗಳು ಪಾಲಿಕೆ ವಿರುದ್ಧ ಹಿಡಿಶಾಪ ಹಾಕುತ್ತಿದ್ದಾರೆ.
ಪಾಲಿಕೆಯ ಬಹುತೇಕ ವಾರ್ಡ್ಗಳಲ್ಲಿ ಸ್ಲಂ ಬೋರ್ಡ್ ಹಾಗೂ ಮಹಾನಗರ ಪಾಲಿಕೆಯಿಂದ ಆಶ್ರಯ ಮನೆಗಳನ್ನು ನಿರ್ಮಿಸಿಕೊಡಲಾಗಿದೆ. ಆದರೆ, ಅವುಗಳ ನಿರ್ವಹಣೆಯೇ ದೊಡ್ಡ ಸವಾಲಾಗಿ ಪರಿಣಮಿಸಿದೆ. ಇದಲ್ಲದೆ, ರಾಜಕಾಲುವೆಗಳನ್ನು ಸರಿಯಾಗಿ ನಿರ್ಮಿಸದ ಪರಿಣಾಮ ಮಳೆ ಬಂದಾಗ ಹರಿಯುವ ನೀರೆಲ್ಲಾ ಮನೆಗಳಿಗೆ ನುಗ್ಗುತ್ತದೆ. ಆದ್ದರಿಂದ ಆ ಮನೆಗಳಲ್ಲಿ ವಾಸಿಸುವ ಬಡ-ಕೂಲಿಕಾರ್ಮಿಕರ ಪಾಡು ಹೇಳತೀರದ್ದಾಗಿದೆ.