ಬಳ್ಳಾರಿ:ಕಾಫಿ ಉದ್ಯಮಿ ವಿ.ಜಿ.ಸಿದ್ಧಾರ್ಥ ಅವರೊಂದಿಗಿನ ನಂಟಿನ ಬಗ್ಗೆ ತಮ್ಮ ಫೇಸ್ ಬುಕ್ ವಾಲ್ನಲ್ಲಿ ಮೆಲುಕು ಹಾಕಿರುವ ಬಳ್ಳಾರಿ ವಲಯದ ಐಜಿಪಿ ಎಂ.ನಂಜುಂಡಸ್ವಾಮಿ, ಬುದ್ಧನಾಗಲು ಹೊರಟ ಸಿದ್ಧಾರ್ಥ ಎಂದು ವ್ಯಾಖ್ಯಾನಿಸಿದ್ದಾರೆ.
ಕೆಫೆ ಕಾಫಿ ಡೇ ಉದ್ಯಮಿ ಸಿದ್ಧಾರ್ಥ ಅವರನ್ನು ನಾನು ಮೊದಲು ನೋಡಿದ್ದು ಅವರ ಮೊದಲ ಕಾಫಿ ಡೇಯಲ್ಲಿ ಎಂದು ನೆನಪು ಮಾಡಿಕೊಂಡಿದ್ದಾರೆ.
ನನ್ನ ಕೆಆರ್‌ಇಸಿ ಗೆಳೆಯ ಶಶಿಮೋಹನ್ ಒಂದು ರಾತ್ರಿ ಊಟ ಮಾಡಿದ ಬಳಿಕ ಕೆಫೆ ಕಾಫಿ ಡೇ ಗೆ ಹೋಗಿದ್ದೆವು. ಅಲ್ಲಿ ಶಶಿ ಮೋಹನ್ ಅವರು ಈ ಸಿದ್ಧಾರ್ಥ ಅವರನ್ನು ಪರಿಚಯಿಸಿದರು. ಹೈದರಾಬಾದ್ ಪೊಲೀಸ್ ಅಕಾಡೆಮಿಯಿಂದ ಆಗತಾನೆ ತರಬೇತಿ ಮುಗಿಸಿ ಬೆಂಗಳೂರಿಗೆ ಬಂದಿದ್ದೆ. ಬೆಂಗಳೂರು ಜೀವನ ಹೊಸದಾಗಿತ್ತು. ಅಂದು ಸಿದ್ಧಾರ್ಥ ಕೆಫೆ ಕಾಫಿ ಡೇಯಲ್ಲಿ ಕೆಲಸ ಮಾಡುವ ಹುಡುಗರಂತೆ ಕಪ್ಪು ಬಣ್ಣದ ಜೀನ್ಸ್ ಪ್ಯಾಂಟ್, ಟೀ ಶರ್ಟ್ ಧರಿಸಿದ್ದರು ಎಂದು ಸಿದ್ದಾರ್ಥ್ ಅವರ ಬಗೆಗಿನ ಪರಿಚಯದ ಮತುಗಳನ್ನು ಹಂಚಿಕೊಂಡಿದ್ದಾರೆ.
ಮೊದಲ ಭೇಟಿಯಲ್ಲಿಯೇ ನಾವಿಬ್ಬರೂ ತುಂಬಾ ಮಾತನಾಡಿದ್ದೆವು. ಹಳೆಯ ಗೆಳೆಯರಂತೆ ಸಿದ್ಧಾರ್ಥ ಖುಷಿಯಿಂದ ತುಂಬಾ ಹೊತ್ತು ಮಾತನಾಡಿದರು. ಆಗ ಅವರ ಮಾವ ಎಸ್.ಎಂ.ಕೃಷ್ಣ ಇನ್ನೂ ರಾಜ್ಯದ ಮುಖ್ಯಮಂತ್ರಿ ಆಗಿರಲಿಲ್ಲ. ಕೆಫೆ ಕಾಫಿ ಡೇಯನ್ನು ಪ್ರಪಂಚದ ಶ್ರೇಷ್ಠ ಕಾಫಿ ಅಂಗಡಿಗಳ ಸರಪಣಿ ಮಾಡುವುದಾಗಿ ಹೇಳುತ್ತಿದ್ದರು. ಅಂದು ಅವರು ಕಂಡ ಕನಸುಗಳನ್ನು ನನಸು ಮಾಡುತ್ತಾ ಸಾಗಿದರು ಎಂದು ಬರೆದಿದ್ದಾರೆ.
ಅವರ ಪರಿಚಯದ ಬಳಿಕ ವಿವಿಧೆಡೆ ತುಂಬಾ ಸಲ ಭೇಟಿಯಾಗಿದ್ದೇವೆ. ಎಸ್.ಎಂ.ಕೃಷ್ಣ ಮುಖ್ಯಮಂತ್ರಿಯಾಗಿದ್ದ ವೇಳೆ ನಾನು ಹಾಸನದ ಎಸ್ಪಿಯಾಗಿದ್ದೆ. ಆಗ ಸಿದ್ಧಾರ್ಥ ತಮ್ಮ ಸ್ವಂತ ಊರು ಚೀಕನಹಳ್ಳಿಯಲ್ಲಿ ಒಂದು ಸಲ ಊಟದ ವ್ಯವಸ್ಥೆ ಮಾಡಿದ್ದರು. ಆಗ ಬ್ರಿಟಿಷರ ಕಾಲದ ತಮ್ಮ ಮನೆ ತೋರಿಸಿದ್ದರು. ಬ್ರಿಟಿಷರ ಕಾಫಿ ತೋಟ ಸ್ವಾತಂತ್ರ್ಯ ಬಳಿಕ ತಮ್ಮ ಮನೆತನದ ಒಡೆತನಕ್ಕೆ ಹೇಗೆ ಬಂತು ಎಂದು ತಿಳಿಸಿದ್ದರು.
ಸಿದ್ಧಾರ್ಥ ಅವರಲ್ಲಿ ಅದಮ್ಯ ಸಾಹಸ ಮನೋಭಾವ ಇತ್ತು. ಸಿದ್ಧಾರ್ಥ ಅವರನ್ನು ಕಂಡಾಗಲೆಲ್ಲ ನಾನು ಅವರಂತೆ ಚೇತನ ಶೀಲನಾಗಿರಬೇಕು ಎಂದುಕೊಳ್ಳುತ್ತಿದ್ದೆ. ಸಿದ್ಧಾರ್ಥ ಅವರು ನನ್ನ ಭಾಷಣ ಹಾಗೂ ಬರಹಗಳ ಅಭಿಮಾನಿಯಾಗಿದ್ದರು. ಸಿದ್ಧಾರ್ಥ ನಿಜವಾಗಿಯೂ ಬುದ್ಧನಾಗುವ ಮೊದಲು ಮಾನವೀಯತೆ ರಾಜ ಕಳೆಯಿಂದ ಬದುಕಿದ್ದರು. ಸಿದ್ಧಾರ್ಥ ಅವರಲ್ಲಿ ಪ್ರಪಂಚದ ಸಾವಿರಾರು ಸತ್ಯಗಳು ಉಳಿದುಬಿಟ್ಟಿದ್ದವು. ಸತ್ಯಗಳನ್ನು ಪ್ರಪಂಚಕ್ಕೆ ತಿಳಿಸಲು ಹಪಾಹಪಿಸುತ್ತಿದ್ದ ಅವರು ಸತ್ಯಗಳನ್ನು ತಿಳಿಸುವ ಮೊದಲೇ ಬುದ್ಧನಾಗಲು ನಡೆದುಬಿಟ್ಟರು ಎಂದು ಹೇಳಿದ್ದಾರೆ.
ಸಿದ್ಧಾರ್ಥ ಅವರ ಮನದೊಳಗಿದ್ದ ಸತ್ಯಗಳೆಲ್ಲಾ ಹೊರಗೆ ಬರಬೇಕು. ಅಕಾಲಿಕ ಸಾವಿಗೆ ಕಾರಣಗಳನ್ನು ಕಂಡು ಹಿಡಿಬೇಕು. ಯಾವ ವ್ಯಕ್ತಿ, ಸಂಘ, ಸಂಸ್ಥೆ, ಇಲಾಖೆಗಳಿಂದ ಅವರು ನೊಂದಿದ್ದರು ಹಾಗೂ ಈ ನಿರ್ಧಾರಕ್ಕೆ ಕಾರಣ ಹೊರ ಬರಬೇಕಿದೆ. ಸಿದ್ಧಾರ್ಥ ಅವನನ್ನು ಆದರ್ಶವಾಗಿ ಕಂಡವರಿಗೆ ನೋವಾಗಿದೆ. ಈ ಘಟನೆಯ ಕುರಿತು ಸತ್ಯ ಹೊರಬರಲಿ. ಸಿದ್ಧಾರ್ಥ ಬುದ್ಧನಾಗಲು ಹೋದ. ಆತ ನನಗೆ ಎಂದೆಂದಿಗೂ ಬುದ್ಧನೆ’‘ ಎಂದು ನಂಜುಂಡ ಸ್ವಾಮಿ ಅವರು ಫೇಸ್ ಬುಕ್ ವಾಲ್ನಲ್ಲಿ ಬರೆದಿದ್ದಾರೆ.