ಬೆಂಗಳೂರು: ವಿಜಯನಗರ ಶ್ರೀ ಕೃಷ್ಣ ದೇವರಾಯ ವಿವಿಯಲ್ಲಿ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ನೇಮಕಾತಿಯಲ್ಲಿ ಭಾರಿ ಭ್ರಷ್ಟಾಚಾರವಾಗಿದೆ ಎಂದು ಆರೋಪಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ ಮಲ್ಲೇಶ್ವರಂನಲ್ಲಿ ಪ್ರತಿಭಟನೆ ನಡೆಸಲಾಯಿತು.
ಬಳ್ಳಾರಿ ಹಾಗು ಕೊಪ್ಪಳ ಜಿಲ್ಲೆಗಳಲ್ಲಿ ಸಾವಿರಾರು ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುತ್ತಿರುವ ಈ ವಿಶ್ವವಿದ್ಯಾಲಯ 2011 ರಲ್ಲಿ ಪ್ರಾರಂಭವಾಯಿತು. ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ಹಾಗೂ ಆಡಳಿತ ನೀಡಬೇಕಾದ ವಿಶ್ವವಿದ್ಯಾಲಯ ಇಂದು ಸಾಕಷ್ಟು ಭ್ರಷ್ಟಾಚಾರ ಹಗರಣಗಳಿಗೆ ಹೆಸರುವಾಸಿ ಆಗುತ್ತಿದೆ. 2016ರಲ್ಲಿ ಈ ವಿಶ್ವವಿದ್ಯಾಲಯಕ್ಕೆ ಕುಲಪತಿಗಳಾಗಿ ನೇಮಕಗೊಂಡ ಪ್ರೊ. ಎಮ್.ಎಸ್. ಸುಭಾಷ ಜವರು ಆರಂಭದ ದಿನಗಳಿಂದಲೂ ವಿವಿಯನ್ನು ಒಂದಲ್ಲ ಒಂದು ವಿವಾದಕ್ಕೆ ಎಡೆ ಮಾಡಿ ಕೊಡುತ್ತಿದ್ದಾರೆ ಎಂದು ಪ್ರತಿಭಟನಾಕಾರರು ದೂರಿದರು.
ಎಬಿವಿಪಿಯಿಂದ ಭ್ರಷ್ಟಾಚಾರ ಖಂಡಿಸಿ ಪ್ರತಿಭಟನೆ ಕುಲಸಚಿವರ ಹಾಗೂ ಕುಲಪತಿಗಳ ಆಂತರಿಕ ಕಚ್ಚಾಟ, ವಿವಿಯಲ್ಲಿ ದಾಖಲಾದ ಜಾತಿ ನಿಂದನೆ ಪ್ರಕರಣಗಳು, ಬೇಕಾಬಿಟ್ಟಿ ಸಿಬ್ಬಂದಿ ವರ್ಗಾವಣೆ ಹಾಗೂ ವಜಾಗೊಳಿಸುವಿಕೆ ಸೇರಿ ಅನೇಕ ಸ್ವಪಕ್ಷಿಯ ನಿರ್ಧಾರಗಳಿಂದ ಕುಲಪತಿಗಳು ವಿವಿಯನ್ನು ತಮ್ಮ ಸ್ವತ್ತಿನಂತೆ ವರ್ತಿಸುತ್ತಿದ್ದಾರೆ. ಪ್ರಸ್ತುತ 5-6 ತಿಂಗಳಿನಿಂದ ಬೋಧಕ -ಬೋಧಕೇತರ ಸಿಬ್ಬಂದಿ ನೇಮಕಾತಿ ಪ್ರಕ್ರಿಯೆಯಲ್ಲಿ ಧನ ಸಹಾಯ ಆಯೋಗ ನೀತಿ ನಿಯಮಗಳನ್ನು ಉಲ್ಲಂಘಿಸಿ, ಅಕ್ರಮವಾಗಿ ನಡೆಸುತ್ತಿದ್ದು, ಕುಲಪತಿಗಳು ಬಡ ಮತ್ತು ಪ್ರತಿಭಾನ್ವಿತ ಅಭ್ಯರ್ಥಿಗಳ ಜೊತೆ ಚೆಲ್ಲಾಟ ಆಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ವಿವಿಯಲ್ಲಿ ನೇಮಕಾತಿಗೆ ಸಂಬಂಧಿಸಿದಂತೆ ಭಾರಿ ಭ್ರಷ್ಟಾಚಾರ ನಡೆಯುತ್ತಿದ್ದರೂ ರಾಜ್ಯ ಸರ್ಕಾರ, ಉನ್ನತ ಶಿಕ್ಷಣ ಇಲಾಖೆ, ಸಚಿವರು ಹಾಗೂ ರಾಜ್ಯಪಾಲರು ಮೌನವಹಿಸಿರುವುದು ಅನುಮಾನಕ್ಕೆ ಎಡೆಮಾಡಿ ಕೊಟ್ಟಿದೆ. ಈ ಕ್ರಮವನ್ನು ಎಬಿವಿಪಿ ತೀವ್ರವಾಗಿ ಖಂಡಿಸಿ, ಅಕ್ರಮ ನೇಮಕಾತಿ ರದ್ದು ಮಾಡಬೇಕೆಂದು ಆಗ್ರಹಿಸಿದೆ.