ಬಳ್ಳಾರಿ:ಗಣಿನಾಡು ಬಳ್ಳಾರಿ ಜಿಲ್ಲಾದ್ಯಂತ ಶ್ರಾವಣ ಮಾಸಾರಂಭ ಶುರುವಾಗಿದ್ದು, ಶ್ರಾವಣ ಮಾಸದ ಶುಭಾರಂಭಕ್ಕೆ ಶುಕ್ರವಾರ ಮುಂಚೂಣಿ ದಿನವಾಗಿದೆ. ಈ ದಿನ ಶ್ರಾವಣ ಶುಕ್ರವಾರವಾಗಿದ್ದು, ಜಿಲ್ಲೆಯ ಆಯಾ ತಾಲೂಕಿನ ಗ್ರಾಮಗಳಲ್ಲಿನ ನಾಗರಕಟ್ಟೆಗೆ ಮಹಿಳೆಯರು, ಚಿಣ್ಣರು ಹಾಲನ್ನೆರೆಯುವ ಮುಖೇನ ನಾಗರಪಂಚಮಿ ಹಬ್ಬಕ್ಕೆ ವಿದ್ಯುಕ್ತವಾಗಿ ಚಾಲನೆ ನೀಡಿದ್ರು.
ಗಣಿಜಿಲ್ಲೆಯಲ್ಲೀಗ ಶ್ರಾವಣ ಮಾಸಾರಂಭ: ನಾಗರಕಟ್ಟೆಗೆ ಹಾಲನ್ನೆರೆದ ಮಹಿಳೆಯರು, ಚಿಣ್ಣರು...! ಗಣಿಜಿಲ್ಲೆಯಲ್ಲಿ ಈ ಮಹಾಮಾರಿ ಕೊರೊನಾ ಸೋಂಕು ದಿನದಿಂದ ದಿನಕ್ಕೆ ಅಟ್ಟಹಾಸ ಮೆರೆಯುತ್ತಿದ್ದು, ಹಬ್ಬ- ಹರಿದಿನಗಳ ಸಂಭ್ರಮಕ್ಕೆ ಒಂದು ರೀತಿಯ ಸೂತಕದ ಕರಿಛಾಯೆ ಮೂಡಿದ್ರೂ ಕೂಡ ಸಾಂಕೇತಿಕವಾಗಿ ನಾಗರಪಂಚಮಿ ಹಬ್ಬವನ್ನ ಆಚರಿಸೋ ಮುಖೇನ ಜನರು ತೃಪ್ತಿಪಟ್ಟುಕೊಂಡರು.
ನಾಗರಪಂಚಮಿ ಹಬ್ಬಕ್ಕೆ ದೂರದ ಊರುಗಳಿಂದ ಮನೆಯ ಮಗಳು, ಮೊಮ್ಮಕ್ಕಳನ್ನ ಕರೆದುಕೊಂಡು ಬರುವ ಸಂಸ್ಕೃತಿಯು ತವರು ಮನೆಯವರದ್ದಾಗಿತ್ತು. ಆದರೆ, ಕೊರೊನಾ ಸೋಂಕಿನಿಂದಾಗಿ ಯಾವ ಊರಿಗೆ ತೆರಳದೆ, ಮನೆಯೊಳಗಿದ್ದವರಷ್ಟೇ ನಾಗರಪಂಚಮಿ ಹಬ್ಬವನ್ನ ಸುರಕ್ಷಿತವಾಗಿ ಆಚರಿಸಿಕೊಂಡರು. ಕೊರೊನಾ ಸೋಂಕಿನ ಭಯದಿಂದಾಗಿ ಸಾಮಾಜಿಕ ಅಂತರ ಕಾಯ್ದುಕೊಂಡೇ ಮಹಿಳೆಯರು, ಚಿಣ್ಣರು ಸಾಲು ಸಾಲಾಗಿ ಬಂದು ನಾಗರಕಟ್ಟೆಗೆ ಹಾಲನೆರೆದು ಭಕ್ತಿ ಸಮರ್ಪಿಸಿದ ದೃಶ್ಯ ಕಂಡುಬಂತು.
ಕಳೆಗುಂದಿದ ಸಂಭ್ರಮ:
ಆಗಸ್ಟ್ ತಿಂಗಳಿಂದಲೇ ಸಾಲು ಸಾಲು ಹಬ್ಬ- ಹರಿದಿನಗಳ ಸಂಭ್ರಮವು ಪ್ರತಿವರ್ಷ ಶುರುವಾಗುತ್ತಿತ್ತು. ಆದರೆ, ಕೊರೊನಾ ಮಹಾಮಾರಿಯಿಂದಾಗಿ ಸಂಭ್ರಮವೇ ಕಳೆಗುಂದಿದಂತಾಗಿದೆ. ಶ್ರಾವಣ ಮಾಸದಲ್ಲಿ ಐದು ಸೋಮವಾರ, ಐದು ಶುಕ್ರವಾರ ಸೇರಿದಂತೆ ಇತರೆ ವಾರಗಳಲ್ಲಿ ವಿಶೇಷ ದಿನಗಳನ್ನಾಗಿ ಪರಿಗಣಿಸಲಾಗುತ್ತಿತ್ತು. ಈಗ ಅದರ ಸಂಭ್ರಮ ಕಳೆಗುಂದುವ ಸಾಧ್ಯತೆಯಿದೆ.