ಬಳ್ಳಾರಿ: ಜಿಂದಾಲ್ ಉಕ್ಕು ಕಾರ್ಖಾನೆಗೆ ಅಂದಾಜು 3,667 ಎಕರೆ ಭೂಮಿಯನ್ನು ಪರಭಾರೆ ಮಾಡಲೇಬೇಕು. ಯಾರ ವಿರೋಧಕ್ಕೂ ಮಣಿಯಬಾರದೆಂದು ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆಯ ರಾಜ್ಯ ಘಟಕದ ಅಧ್ಯಕ್ಷ ಸುಧಾಕರ ಎಸ್.ಶೆಟ್ಟಿ ಸರ್ಕಾರವನ್ನು ಆಗ್ರಹಿಸಿದ್ದಾರೆ.
ಜಿಲ್ಲೆಯ ಸಂಡೂರು ತಾಲೂಕಿನ ತೋರಣಗಲ್ಲಿನ ಜಿಂದಾಲ್ ವಿದ್ಯಾನಗರದಲ್ಲಿಂದು ನಡೆದ ರಾಜ್ಯಮಟ್ಟದ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಸಮಾವೇಶದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಗುತ್ತಿಗೆ ಮತ್ತು ಮಾರಾಟ ಕರಾರಿನ ಅನ್ವಯ ರಾಜ್ಯ ಸರ್ಕಾರವು 3,667 ಎಕರೆ ಭೂಮಿಯನ್ನು ಮಂಜೂರಾತಿ ಮಾಡಿದೆ. ಲೀಸ್ ಕಂ ಸೇಲ್ ಡೀಡ್ನಡಿ ಮಾಡಲಾದ ಈ ಭೂಮಿಯನ್ನು ಜಿಂದಾಲ್ ಸಮೂಹ ಸಂಸ್ಥೆ ಹೆಸರಿನಡಿ ಪರಭಾರೆ ಮಾಡಲೇಬೇಕು. ಇಲ್ಲವಾದ್ರೆ ರಾಜ್ಯದಲ್ಲಿ ಕೈಗಾರಿಕಾ ಉದ್ದಿಮೆಗಳು ಭಯಪಡುತ್ತಾರೆ. ಕೇವಲ ಬೆಂಗಳೂರು ಕೇಂದ್ರಿತವಾಗಿ ಕೈಗಾರಿಕಾ ಸಂಸ್ಥೆಗಳ ಸ್ಥಾಪನೆಗೆ ಮುಂದಾಗುವುದರಿಂದ ಬಳ್ಳಾರಿ ಸೇರಿದಂತೆ ಉಳಿದ ಜಿಲ್ಲೆಗಳ ಜನರು ಬೆಂಗಳೂರಿನತ್ತ ಮುಖ ಮಾಡಬೇಕಾಗುತ್ತೆ ಎಂದರು.