ಬಳ್ಳಾರಿ: ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ನಾನಾ ಗ್ರಾಮಗಳಲ್ಲಿನ ಗೋಮಾಳ ಹಾಗೂ ಸರ್ಕಾರಿ ಭೂಮಿಯಲ್ಲಿ ಅಕ್ರಮವಾಗಿ ಉಳುಮೆ ಮಾಡುತ್ತಿರುವುದರಿಂದ ತೊಂದರೆಯಾಗಿದೆ ಎಂದು ಆರೋಪಿಸಿ ಕುರಿ - ಮೇಕೆ ಸಾಕಣೆದಾರರ ಸಂಘ ಪ್ರತಿಭಟನೆ ನಡೆಸಿದೆ.
ಸರ್ಕಾರಿ ಭೂಮಿಯಲ್ಲಿ ಅಕ್ರಮ ಉಳುಮೆ: ಕುರಿ, ಮೇಕೆ ಸಾಕಣೆದಾರರ ಪ್ರತಿಭಟನೆ - Government land
ಹಗರಿಬೊಮ್ಮನಹಳ್ಳಿ ಪಟ್ಟಣದ ತಾಲೂಕು ಕಚೇರಿ ಮುಂದೆ ಜಮಾಯಿಸಿದ್ದ ಕುರಿ, ಮೇಕೆ ಸಾಕಣೆದಾರರು ಗೋಮಾಳ, ಸರ್ಕಾರಿ ಭೂಮಿಯನ್ನ ಅತಿಕ್ರಮಿಸಿದವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಗರಿಬೊಮ್ಮನಹಳ್ಳಿ ತಾಲೂಕಿನ ಗುಳೇದಾಳ್, ಹಂಪಾಪಟ್ಟಣ, ಓಬಳಾಪುರ, ಮುಟುಗನಹಳ್ಳಿ, ಸೊಬಟಿ, ವರದಾಪುರ, ಕೇಶವರಾಯನಬಂಡಿ, ಬಸರಕೋಡು, ಉಲವತ್ತಿ ಸೇರಿ ಪಟ್ಟಣದ ಹಳ್ಳಕೊಳ್ಳಗಳು, ಗೋಮಾಳ, ಸರ್ಕಾರಿ ಭೂಮಿ ಅತಿಕ್ರಮಿಸಿ ಅಕ್ರಮವಾಗಿ ಉಳುಮೆ ಮಾಡಿಕೊಂಡಿದ್ದಾರೆ. ಕಳೆದ ದಶಕಗಳ ಹಿಂದಷ್ಟೇ ಈ ತಾಲೂಕು ಹೈನುಗಾರಿಕೆಯಿಂದ ಸಮೃದ್ಧಿಯಾಗಿತ್ತು. ರೈತರು ನೆಮ್ಮದಿಯಿಂದ ಬದುಕು ಸಾಗಿಸುತ್ತಿದ್ದರು. ಆದರೆ, ಈ ರೀತಿ ಸರ್ಕಾರಿ ಭೂಮಿಯನ್ನು ಅತಿಕ್ರಮಿಸಿ ಉಳುಮೆ ಮಾಡಿಕೊಂಡಿದ್ದರಿಂದ, ಕುರಿ ಮತ್ತು ಜಾನುವಾರುಗಳ ಸಾಕಣೆ ಹಾಗೂ ಹೈನುಗಾರಿಕೆ ಸಹ ಕುಂಠಿತವಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.
ತಲ ತಲಾಂತರದಿಂದ ಕುರಿಸಾಕಾಣಿಕೆಯನ್ನು ವೃತ್ತಿಯನ್ನಾಗಿಸಿಕೊಂಡು ಬಂದ ಕುರಿಗಾಯಿಗಳಿಗೆ ಇದರಿಂದ ಅನ್ಯಾಯವಾಗುತ್ತಿದೆ. ಕೂಡಲೇ ತಾಲೂಕು ಆಡಳಿತ ಕ್ರಮ ಕೈಗೊಂಡು ನ್ಯಾಯ ಒದಗಿಸಿ ಕೊಡಬೇಕೆಂದು ಪ್ರತಿಭಟನಕಾರರು ಆಗ್ರಹಿಸಿದ್ದಾರೆ.