ಬಳ್ಳಾರಿ: ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರೊಬ್ಬರ ವಿರುದ್ಧ ಸಂಶೋಧನಾ ವಿದ್ಯಾರ್ಥಿನಿ ಲೈಂಗಿಕ ದೌರ್ಜನ್ಯದ ದೂರು ನೀಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಈ ದೂರಿನ ಕುರಿತು ವಿಚಾರಣೆ ನಡೆಸಲು ವಿಶ್ವವಿದ್ಯಾಲಯವು ಸಮಿತಿಯೊಂದನ್ನು ರಚಿಸಿದೆ.
ವಿಶ್ವವಿದ್ಯಾಲಯದ ಕುಲಸಚಿವ ಪ್ರೊ. ಎಸ್.ಸಿ. ಪಾಟೀಲ್ ಅವರಿಗೆ ವಿದ್ಯಾರ್ಥಿನಿ ದೂರು ನೀಡಿದ್ದು, ಸಹಾಯಕ ಪ್ರಾಧ್ಯಾಪಕರ ಅಸಭ್ಯ ವರ್ತನೆ ಬಗ್ಗೆ ವಿವರಿಸಿದ್ದಾರೆ. ದೂರಿಗೆ ಪೂರಕವಾಗಿ ಕೆಲವು ಸಾಕ್ಷ್ಯಗಳನ್ನೂ ನೀಡಿದ್ದಾರೆ. ವಿದ್ಯಾರ್ಥಿನಿ ಹಾಗೂ ಪ್ರಾಧ್ಯಾಪಕರ ನಡುವಿನ ವಾಟ್ಸ್ಆ್ಯಪ್ ಸಂದೇಶ, ಫೋನ್ ಕರೆಗಳ ಬಗ್ಗೆಯೂ ಮಾಹಿತಿ ಒದಗಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಈ ಹಿನ್ನೆಲೆಯಲ್ಲಿ ಸಿಂಡಿಕೇಟ್ ಸದಸ್ಯೆ ಪದ್ಮಾ ವಿಠಲ್, ಸಮಾಜ ಕಾರ್ಯ ವಿಭಾಗದ ಪ್ರಾಧ್ಯಾಪಕರಾದ ಪ್ರೊ.ಪವಿತ್ರಾ, ಪ್ರೊ.ಗೌರಿ ಮಾಣಿಕ್ ಮಾನಸ, ಕಾನೂನು ಅಧಿಕಾರಿ ಜುಬೇರ್ ಅವರನ್ನೊಳಗೊಂಡ ಸಮಿತಿ ನೇಮಿಸಲಾಗಿದೆ. ಈ ಗಂಭೀರ ಆರೋಪದ ಕುರಿತು ವಿಚಾರಣೆ ಆರಂಭಿಸಿದ್ದು, ವಿದ್ಯಾರ್ಥಿನಿ ಮತ್ತು ಆರೋಪಿ ಸಹಾಯಕ ಪ್ರಾಧ್ಯಾಪಕರನ್ನು ಕರೆಸಿ ಹೇಳಿಕೆ ದಾಖಲಿಸಿಕೊಂಡಿದೆ ಎಂದು ಗೊತ್ತಾಗಿದೆ.
ಈಗ ದೂರು ನೀಡಿರುವ ವಿದ್ಯಾರ್ಥಿನಿ ಮೊದಲಿಗೆ ಬೇರೊಬ್ಬ ಹಿರಿಯ ಪ್ರಾಧ್ಯಾಪಕರ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸುತ್ತಿದ್ದರು. ತದನಂತರ ಗೈಡ್ ಬದಲಾಯಿಸಿಕೊಂಡು ಸಹಾಯಕ ಪ್ರಾಧ್ಯಾಪಕರ ಮಾರ್ಗದರ್ಶನದಡಿ ತಮ್ಮ ಸಂಶೋಧನೆ ಮುಂದುವರಿಸಿದ್ದರು. ಮಾರ್ಗದರ್ಶಕರ ಬದಲಾವಣೆಗೆ ಕಾರಣ ತಿಳಿದುಬಂದಿಲ್ಲ. ಈ ಪ್ರಕರಣವನ್ನು ರಾಜಿ - ಸಂಧಾನದ ಮೂಲಕ ಮುಕ್ತಾಯಗೊಳಿಸಲು ಕೆಲವರು ಮಧ್ಯಸ್ಥಿಕೆ ವಹಿಸಿದ್ದರು ಎಂದು ಹೇಳಲಾಗಿದೆ.
ಆದರೆ, ರಾಜಿ ಸಂಧಾನಕ್ಕೆ ವಿದ್ಯಾರ್ಥಿನಿ ಒಪ್ಪದೇ ಕುಲಸಚಿವರಿಗೆ ದೂರು ನೀಡಿದ್ದರಿಂದ ಈ ಪ್ರಕರಣ ಬೆಳಕಿಗೆ ಬಂದಿದೆ. ಸದ್ಯ ವಿಚಾರಣಾ ಸಮಿತಿ ವರದಿ ಆಧರಿಸಿ ವಿಶ್ವವಿದ್ಯಾಲಯವು ಮುಂದಿನ ಕ್ರಮ ಕೈಗೊಳ್ಳಲಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.
ಲೈಂಕಿಕ ಕಿರುಕುಳದ ದೂರು ಬಂದಿರುವುದು ನಿಜ. ಸಹಾಯಕ ಪ್ರಾಧ್ಯಾಪಕರೊಬ್ಬರು ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ವಿದ್ಯಾರ್ಥಿನಿ ದೂರು ನೀಡಿದ್ದಾರೆ ಎಂದು ವಿಎಸ್‌ಕೆಯು ಕುಲಸಚಿವ ಪ್ರೊ. ಎಸ್.ಸಿ.ಪಾಟೀಲ ಸ್ಪಷ್ಟ ಪಟ್ಟಿದ್ದಾರೆ. ಕಾನೂನಿನ ಪ್ರಕಾರ ದೂರಿನ ವಿಚಾರಣೆಗೆ ಸಮಿತಿ ರಚಿಸಲಾಗಿದೆ. ಸಮಿತಿಯು ಎರಡು ದಿನ ವಿಚಾರಣೆ ನಡೆಸಿದೆ ಎಂದು ಮಾಹಿತಿ ನೀಡಿದರು. ಆದರೆ, ದೂರಿನ ವಿವರಗಳನ್ನು ಬಹಿರಂಗ ಪಡಿಸಲು ಕುಲಪತಿ ಬಯಸಲಿಲ್ಲ.
ಇದನ್ನೂ ಓದಿ:ವಿದ್ಯಾರ್ಥಿನಿಯೊಂದಿಗೆ ಮಾತನಾಡಿದ್ದಕ್ಕೆ ಅಪಹರಿಸಿ ಹಲ್ಲೆ: ಇಬ್ಬರ ಬಂಧನ, ಮತ್ತಿಬ್ಬರು ಪರಾರಿ